ಜಿಲ್ಲಾ ಸಚಿವರಾಗಿದ್ದಾಗ ನಿಮ್ಮ ಕೊಡುಗೆ ಏನು: ಕಾಂಗ್ರೆಸ್ ಪ್ರಶ್ನೆ
ನರಸಿಂಹರಾಜಪುರ: ಜಯಪ್ರಕಾಶ ಹೆಗ್ಡೆ ಅವರು ಅಡಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪ ಮಾಡುತ್ತಿರುವ ಶಾಸಕ ಡಿ.ಎನ್. ಜೀವರಾಜ್ ಅವರು ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಡಕೆ ಬೆಳೆಗಾರರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ಸವಾಲು ಎಸೆದಿದೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುದ ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎ. ಅಬೂಬಕರ್, ಲೋಕಸಭಾ ಚುನಾವಣೆ ಪ್ರಚಾರ ಸಭೆಗಳಲ್ಲಿ ಡಿ.ಎನ್. ಜೀವರಾಜ್ ಅವರು ಜಯಪ್ರಕಾಶ ಹೆಗ್ಡೆ ಅವರ ಮೇಲೆ ಇಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವೇ ಹುಲಿ ಯೋಜನೆ ಜಾರಿಗೆ ತಂದಿದೆ. ಆ ಸಂದರ್ಭದಲ್ಲಿ ಶಾಸಕರು ಕ್ಷೇತ್ರದ ಜನತೆಯ ಕ್ಷಮೆಯನ್ನೂ ಸಹ ಕೇಳಿದ್ದರು. ಅದನ್ನು ಅವರು ಈಗ ಮರೆತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಭೂ ಒತ್ತುವರಿ ಕಾಯ್ದೆ 192 ಎ ಜಾರಿಗೆ ತಂದು ರೈತರನ್ನು ಭೂ ಕಳ್ಳರಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.