ವೃದ್ಧೆ ಸಾವು: ವೈದ್ಯರ ಮೇಲೆ ಹಲ್ಲೆ
ಚಿಕ್ಕಮಗಳೂರು: ಅಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ವೃದ್ದೆ ಮೃತಪಟ್ಟಿದ್ದು ಇದರಿಂದ ಕುಪಿತಗೊಂಡ ಅವರ ಸಂಬಂಧಿಕರು ವೈದ್ಯರು ಹಾಗು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ನಡೆದಿದೆ.
ವೈದ್ಯರಾದ ಡಾ ಚಂದ್ರಶೇಖರ್ ಸಾಲಿಮಠ್ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು ಸ್ಟಾಫ್ ನರ್ಸ್ ಮೇಲೂ ಹಲ್ಲೆಗೆ ಪ್ರಯತ್ನ ನಡೆದಿದೆ.
ಹಾಲೇನಹಳ್ಳಿಯ ನಿವಾಸಿ ಗೌರಾಬಿ (70) ಎಂಬ ವೃದ್ದೆ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರಲಾಗಿತ್ತು. ಆಗ ಡಾ ಚಂದ್ರಶೇಖರ್ ಅವರು ಕರ್ತವ್ಯದಲ್ಲಿದ್ದರು. ವೃದ್ದೆಯ ಆರೋಗ್ಯ ಸ್ಥಿತಿ ನೋಡಿ ಬದುಕುಳಿಯುವ ಸಾದ್ಯತೆ ಕಡಿಮೆ ಇದೆ ಎಂದು ವೈದ್ಯರು ವೃದ್ದೆಯ ಸಂಬಂಧಿಕರಿಗೆ ಹೇಳಿದರೆನ್ನಲಾಗಿದೆ. ಬಳಿಕ ಚಿಕಿತ್ಸೆ ನೀಡಿದ ಕೆಲವೇ ಕ್ಷಣದಲ್ಲಿ ಗೌರಾಬಿ ಅವರು ಮೃತಪಟ್ಟರು. ಇದರಿಂದ ಕುಪಿತಗೊಂಡ ಸಂಬಂಧಿಕರು ಸ್ಥಳದಲ್ಲಿಯೇ ಇದ್ದ ಡಾ. ಸಾಲಿಮಠ್ ಅವರನ್ನು ಥಳಿಸಿದ್ದಾರೆ. ಇಷ್ಟೇ ಅಲ್ಲದೆ ಮಹಿಳಾ ತುರ್ತು ಚಿಕಿತ್ಸಾ ಘಟಕದ ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಪೋಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಡಾ. ಸಾಲಿಮಠ್ ನಗರ ಠಾಣೆಗೆ ದೂರು ನೀಡಿದ್ದಾರೆ.