ಸವಿತಾ ಸಮಾಜದಿಂದ ಉತ್ಸವಮೂರ್ತಿ ಪ್ರತಿಷ್ಠಾಪನೆ
ಕ.ಪ್ರ. ವಾರ್ತೆ ಬೀರೂರು ಮಾ.27
ಪಟ್ಟಣದ ಸವಿತಾ ಸಮಾಜದ ವತಿಯಿಂದ ಇಲ್ಲಿನ ಸಮಾಜದ ಆವರಣದಲ್ಲಿ ನೂತನ ಉತ್ಸವಮೂರ್ತಿ ಪ್ರತಿಷ್ಠಾಪನಾ ಹಾಗೂ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಅರ್ಚಕ ರಾಜಣ್ಣ ಅವರ ಉಪಸ್ಥಿತಿಯಲ್ಲಿ ಪ್ರಧಾನ ಹೋಮ, ಪಂಚಸೂಕ್ತ ಹೋಮ, ಪಂಚಗವ್ಯ, ಜಲಾದಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ ಹಾಗೂ ಮಹಾಸುದರ್ಶನ ಹೋಮ ಸೇರಿದಂತೆ ಸೀತಾರಾಮರ ದಿವ್ಯಕಲ್ಯಾಣೋತ್ಸವ ಹಾಗೂ ಶ್ರೀರಾಮತಾರಕ ಹೋಮ ಪೂರ್ಣಾಹುತಿ ಕಾರ್ಯಕ್ರಮ ನಡೆಯಿತು.
ಗಣ್ಯರು ಸೇರಿದಂತೆ ಹಲವರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಸವಿತಾ ಸಮಾಜದವರ ಶ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಆಶೀರ್ವಚನದಲ್ಲಿ ಪಾಲ್ಗೊಂಡ ಋತ್ವಿಜರು ನಮ್ಮ ಬದುಕಿನ ಆದರ್ಶಯುತ ಮೌಲ್ಯಗಳಿಗೆ ಪ್ರೇರಕ ಶಕ್ತಿ ಶ್ರೀರಾಮನ ಸತ್ಯನಿಷ್ಠತೆ ಹಾಗೂ ಕರ್ತವ್ಯಪರತೆ, ರಾಮನ ಆದರ್ಶ ಬದುಕಿನ ಮೌಲ್ಯಗಳಿಗೆ ನಮ್ಮ ದೇಶ ಇಂದು ಹೆಚ್ಚಿನ ಬೆಲೆ ನೀಡದ್ದರಿಂದಾಗಿ ರಾಮರಾಜ್ಯದ ಬದಲು ರಾವಣ ರಾಜ್ಯಗಳಾಗಿ ಪರಿವರ್ತಿತವಾಗುತ್ತಿವೆ. ರಾಮನ ಬಗ್ಗೆ ಬೇರೆಯವರಿಗೆ ಆದರ್ಶ ಬೋಧನೆ ಮಾಡುವ ಮೊದಲು ನಾವೂ ಆದರ್ಶ ಬದುಕಿಗೆ ಸಂಕಲ್ಪಿತರಾಗಬೇಕೆಂಬುದನ್ನು ನೆನಪಿಸಿದರು.
ದೈವ ಸಾಕ್ಷಾತ್ಕಾರಕ್ಕೆ ಯಾವುದೇ ಜಾತಿ- ಮತ ಧರ್ಮದ ಸೀಮಿತತೆಯಿಲ್ಲ. ರಾಮಾಯಣ ಬರೆದ ವಾಲ್ಮಿಕಿಗೆ ಪ್ರತಿ ಧರ್ಮದವರು ಋಣಿಯಾಗಿರಬೇಕೆಂಬುದನ್ನು ತಿಳಿಸಿದರು.
ಸವಿತಾ ಸಮಾಜದವರು ಸೇರಿದಂತೆ ಹಲವು ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.