ಕಠಿಣ ಶ್ರಮ ಯಶಸ್ಸಿನ ಮೆಟ್ಟಿಲು
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ. 28
ಜ್ಞಾನದ ಬಾಗಿಲು ತೆರೆಯುವ ಕೀಲಿಕೈ ವಿದ್ಯೆ. ವಿದ್ಯೆಗೆ ವಿನಯ ಭೂಷಣ. ವಿದ್ಯೆ ಸಾಧಕನ ಸ್ವತ್ತು ಎಂದು ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ನಗರದ ಯುರೇಕಾ ಅಕಾಡೆಮಿಯಲ್ಲಿ ಆಯೋಜಿಸಿರುವ ಸಿಇಟಿ ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಜೀವನ ಒಂದು ನಾಟಕ ಶಾಲೆ. ಇಲ್ಲೂ ಸ್ಪರ್ಧೆ ಅನಿವಾರ್ಯ. ಸಿಇಟಿ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕಾದರೆ ಮನಸ್ಸಿಟ್ಟು ಅರ್ಥ ಮಾಡಿಕೊಂಡು ಓದುವುದು ಮುಖ್ಯ ಎಂದರು.
ಬೆಳಗಿನ ಜಾವ ಓದುವುದರಿಂದ ಹೆಚ್ಚು ಅನುಕೂಲವಿದೆ. ನಿತ್ಯ ಮೂರು ಲೀಟರ್ ನೀರು ಕುಡಿಯಬೇಕು. ತರಕಾರಿ- ಹಣ್ಣು ಪೌಷ್ಟಿಕಾಂಶದ ಆಹಾರ ಸೇವನೆ, ಲಘು ವ್ಯಾಯಾಮದಿಂದ ಲವಲವಿಕೆ ಮೂಡುತ್ತದೆ. ಟಿವಿಯನ್ನು ಆದಷ್ಟು ದೂರ ಮಾಡಿ, ರೇಡಿಯೋವನ್ನು ಹತ್ತಿರವಾಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸತತ ಪ್ರಯತ್ನ: ಎಐಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ವಿಧೇಯತೆ, ಶಿಸ್ತು, ಛಲ, ಶ್ರದ್ಧೆ, ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಸತತ ಪ್ರಯತ್ನ ಹಾಗೂ ಉತ್ತಮ ಮಾರ್ಗದರ್ಶನ ಯಶಸ್ಸಿನ ಮೆಟ್ಟಿಲು. ಸಾಧಕನಿಗೆ ಆಕಾಶದಷ್ಟು ಅವಕಾಶಗಳಿವೆ. ಸೂಕ್ತ ತರಬೇತಿಯೊಂದಿಗೆ ಪ್ರಶಾಂತ, ಪೂರಕ ವಾತಾವರಣದಲ್ಲಿ, ಸಮಾನ ಮನಸ್ಕರೊಂದಿಗೆ ಅರ್ಥ ಮಾಡಿಕೊಂಡು ಓದಿದರೆ ಸಿಇಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬಹುದು ಎಂದರು.
ರಾಜ್ಯದಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳಡಿ ಸರ್ಕಾರ 10 ಕೋಟಿಗೂ ಹೆಚ್ಚು ನೆರವು ನೀಡುತ್ತಿದೆ ಎಂದ ಅವರು, ಮುಂದಿನ ವ್ಯಾಸಂಗಕ್ಕೆ ಸೂಕ್ತ ಕಾಲೇಜುಗಳ ಆಯ್ಕೆಯನ್ನು ಆನ್ಲೈನ್ ಮೂಲಕ ಮೊದಲೇ ನಿಗದಿಸಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚಿನ ಸ್ಪರ್ಧೆ: ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ದೊಡ್ಡಮಲ್ಲಪ್ಪ ಮಾತನಾಡಿ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣ ಬಹುಜನರ ಆಸಕ್ತಿಯಾದ್ದರಿಂದ ಇಲ್ಲಿಯ ಪ್ರವೇಶಕ್ಕೆ ಹೆಚ್ಚಿನ ಸ್ಪರ್ಧೆ ಇರುತ್ತದೆ. ಸೂಕ್ತ ತರಬೇತಿ ಪಡೆದು ಪ್ರವೇಶ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡು ಉತ್ತರಿಸಿದರೆ ಒಳ್ಳೆಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದೆಂದರು.
ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, 1995 ರಿಂದ ಸಿಇಟಿ ತರಬೇತಿ ಕಾರ್ಯಾಗಾರವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳು ಎಂಜಿನಿಯರ್ ಮತ್ತು ವೈದ್ಯರಾಗಿ ಸಮಾಜಕ್ಕೆ ಉಪಯುಕ್ತ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಿವಮೊಗ್ಗದ ಪ್ರೊ. ರಶ್ಮಿ, ವೈದ್ಯ ಡಾ. ನಾಯಕ್, ಕೃಷಿ ಅಧಿಕಾರಿ ಬಿಜಾಪುರ್, ಪತ್ರಕರ್ತರಾದ ಪ್ರಭುಲಿಂಗಶಾಸ್ತ್ರಿ ಮತ್ತು ಸಂತೋಷ್ ವೇದಿಕೆಯಲ್ಲಿದ್ದರು. ಶಿಕ್ಷಕಿ ಮಮತಾ ವಂದಿಸಿದರು.
ಬೆಳಗಿನ ಜಾವ ಓದುವುದರಿಂದ ಹೆಚ್ಚು ಅನುಕೂಲವಿದೆ. ನಿತ್ಯ ಮೂರು ಲೀಟರ್ ನೀರು ಕುಡಿಯಬೇಕು. ತರಕಾರಿ- ಹಣ್ಣು ಪೌಷ್ಟಿಕಾಂಶದ ಆಹಾರ ಸೇವನೆ, ಲಘು ವ್ಯಾಯಾಮದಿಂದ ಲವಲವಿಕೆ ಮೂಡುತ್ತದೆ. ಟಿವಿಯನ್ನು ಆದಷ್ಟು ದೂರ ಮಾಡಿ, ರೇಡಿಯೋವನ್ನು ಹತ್ತಿರವಾಗಿಸಿಕೊಳ್ಳಬೇಕು.
- ಡಾ. ಜೆ.ಪಿ. ಕೃಷ್ಣೇಗೌಡ