ಚುನಾವಣಾ ಕರ್ತವ್ಯ ಪರಿಣಾಮಕಾರಿಯಾಗಿರಲಿ
ಕಡೂರು: ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು ಯಾವುದೇ ರೀತಿಯ ಲೋಪವಾಗದಂತೆ ಎಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಸೂಚನೆ ನೀಡಿದ್ದಾರೆ.
ಕಡೂರಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಚಕ್ಷಣಾ ಸಮಿತಿ, ಕಣ್ಗಾವಲು ಸಮಿತಿ ಹಾಗೂ ವೀಡಿಯೋ- ವೀವಿಂಗ್ ಟೀಂ, ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ವಿವಿಧ ತಂಡದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಯಾವುದೇ ರೀತಿಯ ಲೋಪ ಬಾರದಂತೆ ಎಚ್ಚರ ವಹಿಸುವುದರ ಜೊತೆಗೆ ಕೇಂದ್ರ ಚುನಾವಣಾ ಆಯೋಗ, ಆಗಿಂದಾಗ್ಗೆ ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದ ಅವರು, ಪ್ರತಿನಿತ್ಯದ ವರದಿಗಳನ್ನು ಸಂಬಂಧಿಸಿದ ಕಚೇರಿಗೆ ನೀಡಬೇಕೆಂದರು.
ಲೋಕಸಭೆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿ ತಂಡಗಳನ್ನು, ಗಡಿ ಪ್ರದೇಶದ ರಸ್ತೆಗಳಲ್ಲಿ ಚೆಕ್ ಪೋಸ್ಟ್ಗಳನ್ನು, ಕಣ್ಗಾವಲು ತಂಡ, ವಿಚಕ್ಷಣಾ ಸಮಿತಿ, ವೀಡಿಯೋ-ವೀವಿಂಗ್ ಟೀಂ, ಚುನಾವಣೆ ಕಂಟ್ರೋಲ್ ರೂಂ ತಂಡಗಳನ್ನು ತೆರೆಯಲಾಗಿದ್ದು, ತಂಡಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಮದ್ಯವನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ಚುನಾವಣಾ ಹಿನ್ನೆಲೆ ಭಾರಿ ಪ್ರಮಾಣದ ಮದ್ಯ ದಾಸ್ತಾನುವಾಗದಂತೆ ಎಚ್ಚರವಹಿಸಬೇಕೆಂದು ಸೂಚನೆ ನೀಡಿದರು.
ಚೆಕ್ ಪೋಸ್ಟ್ ಹಾಗೂ ಇನ್ನಿತರೆ ಜಾಗದಲ್ಲಿ ಹಣ ಒಳಗೊಂಡಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳುವಾಗ ನಿಯಮಾನುಸಾರ ಮಹಜರ್ ಮಾಡುವುದರೊಂದಿಗೆ ಅವುಗಳನ್ನು ಸೀಜ್ ಮಾಡಬೇಕೆಂದು ತಿಳಿಸಿದರು.