ಮಧು ವಿರುದ್ಧ ಬೀದಿಗಿಳಿದ ಕುಮಾರ
ಶಿವಮೊಗ್ಗ: 'ರೋಷಾಗ್ನಿ ಜ್ವಾಲೆ'ಯಿಂದ ಹೊತ್ತಿ ಉರಿಯುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಅವರು ತಮ್ಮ ಮಧು ಬಂಗಾರಪ್ಪ ಅವರ ವಿರುದ್ಧ ಸಮರ ಸಾರಿದ್ದಾರೆ. ನಗರಕ್ಕೆ ದಿಢೀರನೇ ಆಗಮಿಸಿದ ಅವರು ಶರಾವತಿ ಡೆಂಟಲ್ ಕಾಲೇಜಿನ ಎದುರು ತಮ್ಮ ಬೆಂಬಲಿಗರೊಂದಿಗೆ ಬೆಳಗಿನಿಂದ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿಯೇ ಬಿಟ್ಟರು. ಇದೂವರೆಗೆ ನಾಲ್ಕು ಗೋಡೆಗಳ ನಡುವೆ, ಇಲ್ಲವೇ ಹೇಳಿಕೆ- ಪ್ರತಿ ಹೇಳಿಕೆಗೆ ಸೀಮಿತವಾಗಿದ್ದ ಸಮರ ಈ ಪ್ರತಿಭಟನೆಯೊಂದಿಗೆ ಬೀದಿಗೆ ಬಂದಿತು.
ಕುಮಾರ್ ಆಕ್ರೋಶಕ್ಕೆ ಕಾರಣವಾಗಿದ್ದು ಶರಾವತಿ ಡೆಂಟಲ್ ಕಾಲೇಜಿಗೆ ಸಂಬಂಧಿಸಿದ ಆಸ್ತಿ ವಿವಾದ. ಈ ಕಾಲೇಜಿನ ಭೂಮಿ ಈಡಿಗ ಸಮುದಾಯಕ್ಕೆ ಸೇರಿದ್ದು, ಮಧು ಬಂಗಾರಪ್ಪ ಅವರು ಅಕ್ರಮವಾಗಿ ಈ ಭೂಮಿಯನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬುದು ಅವರ ನೇರ ಆರೋಪ.
ಟ್ರಸ್ಟ್ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿರುವ ಈ ಪ್ರಕರಣವನ್ನು ಸರ್ಕಾರ ಕೂಡಲೇ ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಕುಮಾರ್ ಬಂಗಾರಪ್ಪ ಒತ್ತಾಯಿಸಿದ್ದಾರೆ.