ಮೋದಿ ಅಲೆಯಲ್ಲಿ ಬಿಜೆಪಿ ಗೆಲವು ಖಚಿತ: ಜೀವರಾಜ್
ನರಸಿಂಹರಾಜಪುರ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಂದ್ರ ಮೋದಿ ಅಲೆ ಇದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜಯಗಳಿಸಲಿದ್ದಾರೆ ಎಂದು ಶಾಸಕ ಡಿ.ಎನ್. ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೋಭಾ ಕರಂದ್ಲಾಜೆಯವರು 1992 ರಲ್ಲಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿಯಾಗುವುದರೊಂದಿಗೆ ರಾಜಕೀಯ ಜೀವನ ಪ್ರಾರಂಭಿಸಿ, ಇಂಧನ ಹಾಗೂ ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಸಚಿವರಾಗಿದ್ದಾಗ ಪಿ.ಡಿ.ಒ. ನೇಮಕ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ, ಮಂಗಳಮುಖಿಯವರಿಗೆ ಮಾಶಾಸನ ನೀಡಿದ್ದರು ಎಂದರು.
ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು ಎಂಬದು ಜನರ ಆಶಯವಾಗಿದ್ದು, ದೇಶದ ಏಕತೆ, ಸಾರ್ವಭೌಮತ್ವ ಕಾಪಾಡುವ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವಸಾನದ ಅಂಚಿನಲ್ಲಿ ಕಾಂಗ್ರೆಸ್: ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ. 2 ವರ್ಷದ ಹಿಂದೆ ನಡೆದ ಉಪಚುನಾವಣೆಯಲ್ಲಿ ಜಯಪ್ರಕಾಶ ಹೆಗ್ಡೆ ಗೆದ್ದಿದ್ದರು. ಆ ಚುನಾವಣೆ ಸಂದರ್ಭದಲ್ಲಿ ಅಡಕೆ ಹಳದಿ, ಎಲೆ ರೋಗ ಪೀಡಿತ ತೋಟದ ಸಂತ್ರಸ್ತರಿಗೆ ರು. 1400 ಕೋಟಿ ಪರಿಹಾರ ನೀಡುವುದಾಗಿ ಕಾಂಗ್ರೆಸ್ ನೀಡಿದ್ದ ಭರವಸೆ ಸುಳ್ಳಾಗಿದೆ ಎಂದವರು.
ಡಾ. ಗೋರಕ್‌ಸಿಂಗ್ ವರದಿ ಜಾರಿಗೆ ತರುತ್ತೇವೆ ಎಂದವರು ವರದಿ ಮಂಡನೆ ಮಾಡಲೇ ಇಲ್ಲ. ಆದರೂ, ಗೋರಕ್ ಸಿಂಗ್ ವರದಿ ಜಾರಿಯಾಗಿದೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ: ಪಶ್ಚಿಮ ಘಟ್ಟದ ಪ್ರದೇಶವನ್ನು ಯುನಿಸ್ಕೋ ಪಟ್ಟಿಗೆ ಸೇರಿಸುವ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ಚುನಾವಣೆ ಘೋಷಣೆ ಆದ ಮೇಲೆ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದನ್ನು ವಿರೋದಿಸಿತ್ತು. ಅಧಿಸೂಚನೆ ಹೊರಡಿಸಿದ 60 ದಿನದ ಒಳಗೆ ಕೇಂದ್ರಕ್ಕೆ ವಿರೋಧ ವ್ಯಕ್ತಪಡಿಸಬೇಕಾಗಿದೆ. ಮುಖ್ಯಮಂತ್ರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು.
ಧನಂಜಯ ಠೇವಣಿ ಇಲ್ಲವಾಗುತ್ತೆ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಧನಂಜಯಕುಮಾರ್ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಏ.1ರಂದು ಅನಂತಕುಮಾರ್ ಶೃಂಗೇರಿಗೆ ಆಗಮಿಸಿ, ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ನೀಲೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಗೋಪಾಲ್, ಕಸಬಾ ಹೋಬಳಿ ಅಧ್ಯಕ್ಷ ಕೆಸವೆ ಮಂಜುನಾಥ್, ಸುಜಾತಾ ಇದ್ದರು.