ಅಭ್ಯರ್ಥಿ ಪರ ಮತ ಕೇಳುವ ಅರ್ಹತೆ ಬಿಜೆಪಿಗಿಲ್ಲ: ನಿಂಗಯ್ಯ
ಮೂಡಿಗೆರೆ: ಪಕ್ಷದ ಪರ ಅಭ್ಯರ್ಥಿಗೆ ಮತ ಕೇಳುವ ಅರ್ಹತೆ ಕಳೆದುಕೊಂಡಿರುವ ಬಿಜೆಪಿಗರು ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಮತ ಹಾಕಿ ಎಂದು ಕೇಳುತ್ತಿದ್ದಾರೆ ಎಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆರೂವರೆ ವರ್ಷಗಳ ಕಾಲ ಆಳ್ವಿಕೆ ನಡೆಸಿದಾಗ ಯಾವ ಘನಂದಾರೀ ಕೆಲಸವನ್ನೂ ಮಾಡಲಿಕ್ಕಾಗಲಿಲ್ಲ ಎಂದು ಲೇವಡಿ ಮಾಡಿದರು.
ಶಾಸಕರ ಜೈಲು ಪರೇಡ್: ರಾಜ್ಯ 5 ವರ್ಷ ಆಳ್ವಿಕೆ ನಡೆಸಿದಷ್ಟು ಅವಧಿಯಲ್ಲಿ ಪರಸ್ಪರ ಕಚ್ಚಾಟ, ಆಂತರಿಕ ಭಿನ್ನಾಭಿಪ್ರಾಯ, ಸದನದಲ್ಲಿ ಬ್ಲೂಫಿಲಂ ವೀಕ್ಷಣೆ, ವಿವಿಧ ಹಗರಣಗಳಲ್ಲಿ ಮಾಜಿ ಮುಖ್ಯಮಂತ್ರಿ, ಅತ್ಯಾಚಾರ ಪ್ರಕರಣಗಳಲ್ಲಿ ಮಂತ್ರಿಗಳು ಮತ್ತು ಶಾಸಕರು ಜೈಲು ಪರೇಡ್ ನಡೆಸಿರುವುದೇ ಅವರ ಬಹುದೊಡ್ಡ ಸಾಧನೆಯಾಗಿದೆ. ಹೀಗಿರುವಾಗ ಮೋದಿಗೆ ಮತ ಕೇಳದೇ ಮತ್ತೇನು ಮಾಡಿಯಾರು ಎಂದರು.
ಸ್ಪರ್ಧಾಳುಗಳಲ್ಲಿ ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್‌ಗೆ ಎಲ್ಲಾ ರೀತಿಯ ಅರ್ಹತೆಗಳಿವೆ. ಅವರು ಒಮ್ಮೆ ಶಾಸಕರಾಗಿ, 4 ಬಾರಿ ಸಂಸದರಾಗಿ, ಮಂತ್ರಿಯೂ ಆಗಿ ದುಡಿದಿದ್ದಾರೆ. ಉತ್ತಮ ಕೆಲಸಗಾರರು ಮೂಲೆ ಗುಂಪಾಗಬಾರದೆಂದು ಧನಂಜಯ ಕುಮಾರ್ ಅವರನ್ನು ದೇವೇಗೌಡರು ಕೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರು ಸಂಸತ್‌ನಲ್ಲಿ ಜನರ ಪರವಾದ ಧ್ವನಿಯಾಗಲಿದ್ದಾರೆ ಎಂದು ಹೇಳಿದರು.
ಧನಂಜಯ್ ಪ್ರವಾಸ: ಧನಂಜಯ ಕುಮಾರ್ ಜಿಲ್ಲಾ ಮತ್ತು ಕ್ಷೇತ್ರದ ಮುಖಂಡರೊಂದಿಗೆ ಪ್ರವಾಸ ನಡೆಸಲಿದ್ದಾರೆ ಎಂದರು.