ಚೆಕ್ ಪೋಸ್ಟ್ ಇದೆ, ತಪಾಸಣೆ ಇಲ್ಲ
ಮೂಡಿಗೆರೆ: ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಸಮಯದಲ್ಲಿ ಕ್ಷೇತ್ರದ ವಿವಿಧೆಡೆ ವಾಹನ ತಪಾಸಣೆಗೆ ಚೆಕ್ಪೋಸ್ಟ್ ಸ್ಥಾಪಿಸಿದ್ದರೂ, ತನಿಖಾಧಿಕಾರಿ ನಿರ್ಲಕ್ಷ್ಯದಿಂದ ತಪಾಸಣೆ ನಡೆಯದೇ ವಾಹನ ಸರಾಗವಾಗಿ ಚಲಿಸುತ್ತಿದ್ದ ದೃಶ್ಯ ಜನ್ನಾಪುರದಲ್ಲಿ ಶನಿವಾರ ಮಧ್ಯಾಹ್ನ ಕಂಡು ಬಂತು.
ಲೋಕಸಭಾ ಚುನಾವಣೆ ಅಕ್ರಮ, ಗೊಂದಲಗಳಿಲ್ಲದೇ ನಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ನೀತಿ, ನಿಯಮ ಪಾಲನೆಯಾಗುತ್ತಿಲ್ಲ. ಜಿಲ್ಲಾ ಚುನಾವಣಾಧಿಕಾರಿ ಪ್ರತಿನಿತ್ಯ ವಿವಿಧ ಸಭೆ ಮೂಲಕ ಸೂಚನೆ ನೀಡುತ್ತಿದ್ದಾರೆ.
ವಿವಿಧ ಹಂತದ ತನಿಖಾದಳ, ತಪಾಸಣಾ ತಂಡ ರಚಿಸಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ನೀತಿ, ನಿಯಮ ಪಾಲನೆಯಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಾಳಿ ನಡೆದಿಲ್ಲ: ಈ ನಡುವೆ ಚುನಾವಣಾ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಆದರೆ ಮೂಡಿಗೆರೆ ವಿಧಾನಸಭಾ ವ್ಯಾಪ್ತಿಯಲ್ಲಿ ಈ ತನಕ ಒಂದೇ ಒಂದು ಅಕ್ರಮ ಮದ್ಯದ ಅಂಗಡಿಗಳ ಮೇಲೆ ದಾಳಿ ನಡೆದಿಲ್ಲ. ದಿನಸಿ ಅಂಗಡಿಗಳಲ್ಲಿ ಯಥೇಚ್ಛ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿವೆ. ಜಿಲ್ಲಾಧಿಕಾರಿಯವರು ಬಾರ್ ಅಂಡ್ ರೆಸ್ಟೊರೆಂಟ್, ವೈನ್ಶಾಪ್ಗಳನ್ನು ಚುನಾವಣೆ ವೇಳೆ ಮುಚ್ಚಲು ಆದೇಶ ಹೊರಡಿಸುವುದಿದೆ. ಆದರೆ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದನ್ನು ನಿಷೇಧಿಸುವವರು ಯಾರು ಎಂಬುದು ತಿಳಿಯದಂತಾಗಿದೆ.
ಅಕ್ರಮದ ಶಂಕೆ: ಮರಳು ಲಾರಿಗಳಲ್ಲಿ ಸೀರೆ, ಪಂಚೆ, ಅಕ್ರಮ ಮದ್ಯ ಸಾಗಾಟದ ಶಂಕೆ ವ್ಯಕ್ತವಾದರೂ ಸಹಾಯಕ ಚುನಾವಣಾಧಿಕಾರಿ ಈ ಆರೋಪವನ್ನು ಸುಳ್ಳು ವದಂತಿ ಎಂದಿರುವುದು ಸಾರ್ವಜನಿಕರ ಆಕ್ರೋಶಗಳಿಗೆ ಕಾರಣವಾಗಿದೆ. ಕ್ಷೇತ್ರದಾದ್ಯಂತ ರೋಡ್ಶೋ, ಸಭೆ ಅನುಮತಿಗಿಂತ ಅಧಿಕ ಸಮಯದವರೆಗೆ ನಡೆದರೂ, ನೀತಿ ಸಂಹಿತೆ ಉಲ್ಲಂಘನೆಗಳು ಅಧಿಕಾರಿಗಳ ಕಣ್ಣೆದುರೇ ನಡೆಯುತ್ತಿದ್ದರೂ ಕ್ರಮ ಜರುಗಿಸುತ್ತಿಲ್ಲ.
ಚೆಕ್ಪೋಸ್ಟ್ಗಳಲ್ಲಿ ನಿಯೋಜಿತ ತನಿಖಾಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಹೀಗಿರುವಾಗ ಸಹಾಯಕ ಚುನಾವಣಾಧಿಕಾರಿ ಸುಳ್ಳು ವದಂತಿ ಎನ್ನಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.