ಸಾವಯವ ಕೃಷಿಯಿಂದ ಭೂ ಫಲವತ್ತತೆ
ತರೀಕೆರೆ: ಸಾವಯವ ಕೃಷಿಯಿಂದ ಭೂ ಫಲವತ್ತತೆ ಹೆಚ್ಚಾಗಿ ಉತ್ತಮ ಇಳುವರಿ ಪಡೆಯಲು ಹಾಗೂ ಮುಂದಿನ ಪೀಳಿಗೆಗೆ ಭೂಮಿ ್ನು ಉಳಿಸಲು ಸಾಧ್ಯ ಎಂದು ಗುಳ್ಳದಮನೆಯ ಈಶ್ವರಪ್ಪ ಹೇಳಿದರು.
ವಿಕಸನ ಸಂಸ್ಥೆ ಮತ್ತು ಕೃಷಿ ಇಲಾಖೆ, ಸಾವಯವ ಕೃಷಿ ಅನುಷ್ಠಾನ ಸಮಿತಿ ಸಹಕಾರ ಪಡೆದು, ಎರೆಹುಳು ಸಾಕಾಣಿಕೆ ಘಟಕ, ಕಾಂಪೋಸ್ಟ್ ಘಟಕ, ಅಜೋಲ ತಯಾರಿಕೆ, ಗಂಜಲ ಸಂಗ್ರಹಣಾ ಡ್ರಂ, ಗಂಜಲ ಸಂಗ್ರಹಣಾ ಕೊಟ್ಟಿಗೆ, ಜೀವಾಮೃತ ತಯಾರಿಕೆ ಘಟಕ ನಿರ್ಮಾಣ, ಬಯೋಡೈಜಸ್ಟರ್ ಹಾಗೂ ಹಸಿರಲೆ ಗೊಬ್ಬರ ಬೀಜಗಳು ಹೀಗೆ ಹಲವಾರು ಕಾರ್ಯಕ್ರಮ ಪಡೆದುಕೊಂಡು ಸಾವಯವ ಕೃಷಿ ಮಾಡಿರುವ ಬಗ್ಗೆ ಅವರು ಮಾತನಾಡಿದರು. ಮುಖ್ಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಹೆಚ್ಚಿನ ಮಹತ್ವ ನೀಡಿ, ಕೃಷಿ ತ್ಯಾಜ್ಯ ಬಳಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಮುಂದಾಗಿದ್ದು ಮತ್ತು ಎರೆಹುಳು ಗೊಬ್ಬರವನ್ನು ಜಮೀನಿನಲ್ಲಿ ಬಳಕೆ ಮಾಡಿದ್ದರಿಂದ ಉತ್ತಮ ಸೌತೆ ಮತ್ತು ಬದನೆ ಬೆಳೆಯನ್ನು ಸಾವಯವ ವಿಧಾನದಿಂದ ಬೆಳೆದುದರಿಂದ ಉತ್ತಮ ಇಳುವರಿ ಬಂದಿದೆ ಎಂದು ತಿಳಿಸಿದ್ದಾರೆ.
ಒಂದೂವರೆ ಎಕರೆಯಲ್ಲಿ 10 ಕ್ವಿಂಟಲ್ ರಾಗಿ
ತರೀಕೆರೆ: ರಾಸಾಯನಿಕ ಔಷಧ ಗೊಬ್ಬರ ಬಳಸಿದರೂ ಉತ್ತಮ ಫಸಲು ತೆಗೆಯುವುದು ಅಸಾಧ್ಯ ಎನ್ನುವ ಸಮಯದಲ್ಲಿ, ತಾಲೂಕಿನ ಬೇಗೂರಿನ ನಿಸರ್ಗ ಜಲಾನಯನ ಅಭಿವೃದ್ಧಿ ಸಮಿತಿ ಸದಸ್ಯ ಜಗನ್ನಾಥ್ ಅವರು ಸಾವಯವ ಕೃಷಿಯಿಂದ ಎರೆಗೊಬ್ಬರ ಬಳಸಿ 1.5 ಎಕರೆ ಜಮೀನಿನಲ್ಲಿ ಹತ್ತು ಕ್ವಿಂಟಲ್ ರಾಗಿ ಇಳುವರಿ ಪಡೆದಿದ್ದಾರೆ. ನಬಾರ್ಡ್ ಜಲಾನಯನ ಯೋಜನೆಯಡಿ ಎರೆಗೊಬ್ಬರ ತಯಾರಿಕೆಗೆ ತೊಟ್ಟಿ ನಿರ್ಮಿಸಿ, ವಿಕಸನ ಸಂಸ್ಥೆ ಮಾರ್ಗದರ್ಶನದಲ್ಲಿ ಎರೆಗೊಬ್ಬರ ತಯಾರಿಸಿದ್ದರು. ಕಳೆದ ವರ್ಷಕ್ಕಿಂತಲೂ 2 ಕ್ವಿಂಟಲ್ ಹೆಚ್ಚಿದ ಇಳುವರಿಯಿಂದ ಗ್ರಾಮದ ಇತರ ರೈತರಿಗೆ ಮಾರ್ಗದರ್ಶನ ಮಾಡುವಂತಿದೆ. ಆಸಕ್ತಿ ಇರುವ ರೈತರನ್ನು ಪ್ರೋತ್ಸಾಹಿಸಬೇಕು, ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳಿಗೆ ಹೆಚ್ಚು ಬೆಲೆ ಮತ್ತು ಮಾನ್ಯತೆ ನೀಡಿದರೆ ರೈತರು ಸಂಪೂರ್ಣವಾಗಿ ಅಭಿವೃದ್ದಿ ಪಡಿಸಿಕೊಳ್ಳಬಹುದು ಎಂದು ಜಗನ್ನಾಥ್ ತಿಳಿಸಿದ್ದಾರೆ.
ಏ.5ರಿಂದ ಗುತ್ಯಮ್ಮದೇವಿ ಪುನರ್ ಪ್ರತಿಷ್ಠಾಪನೆ
ನರಸಿಂಹರಾಜಪುರ: ಪಟ್ಟಣದ ಹಳೇಪೇಟೆಯಲ್ಲಿ ಸುಮಾರು ರು. 60 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಗುತ್ಯಮ್ಮದೇವಿ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮ ಏ. 5 ರಿಂದ 7ರ ವರೆಗೆ ನಡೆಯಲಿದೆ ಎಂದು ಗುತ್ಯಮ್ಮ ದುರ್ಗಾಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಪಿ.ಆರ್. ಸದಾಶಿವ ತಿಳಿಸಿದರು. ಏ. 6 ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾಯದರ್ಶಿ ಪ್ರಸನ್ನನಾಥ ಶ್ರೀ ನಾಗಸುಬ್ರಮಣ್ಯ ಪುನರ್ ಪ್ರತಿಷ್ಟಾಪನೆ ನೆರವೇರಿಸಿ ಆಶೀರ್ವಾಚನ ನೀಡಲಿದ್ದಾರೆ. ಏ. 7 ರಂದು ಹರಿಹರಪುರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀ ಗುತ್ಯಮ್ಮ ಮತ್ತು ಪರಿವಾರ ದೇವರಿಗೆ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ. 5 ರ ಶನಿವಾರ ಸಂಜೆ 6 ರಿಂದ ಕು. ಸೌಮ್ಯ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ ಹಾಗೂ 7.30ರಿಂದ ಕೊಪ್ಪದ ಕು.ಪ್ರಿಯಾಂಕ ಮತ್ತು ಕು.ಶ್ರೇಯಾಂಕ ಅವರಿಂದ ಭರತ ನಾಟ್ಯ ನಡೆಯಲಿದೆ. ಭಾನುವಾರ ಸಂಜೆ 7 ಗಂಟೆಯಿಂದ ಭದ್ರಾವತಿಯ ಸುಬ್ರಮಣ್ಯ ಮತ್ತು ತಂಡದವರಿಂದ ಭಕ್ತಿಸುಧೆ ಸುಗಮ ಸಂಗೀತ ನಡೆಯಲಿದೆ.
ಸ್ವ ಉದೋಗ ತರಬೇತಿಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು: ಕಾರ್ಪೊರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಸ್ವ ಉದ್ಯೋಗ ತರಬೇತಿಗೆ ನಿರುದ್ಯೋಗಿ ಯುವಕ- ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೇಸಿಕ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ, ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಬೇಸಿಕ್ಸ್, ಕಂಪ್ಯೂಟರ್ ಡಿಟಿಪಿ, ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್, ಹೈನುಗಾರಿಕೆ (ಡೈರಿ), ಡ್ರೆಸ್ ಡಿಸೈನಿಂಗ್, ಆಹಾರ ವಸ್ತುಗಳು ಬೇಕರಿ ಉತ್ಪನ್ನಗಳ ತಯಾರಿಕೆ, ಮಲ್ಟಿಫೋನ್ ಸರ್ವಿಸಿಂಗ್, ಪೇಪರ್ ಕವರ್, ಪೇಪರ್ ಬ್ಯಾಗ್, ಎನ್ವಲಪ್ ಮತ್ತು ಫೈಲ್ಗಳ ತಯಾರಿಕೆ, ಗೃಹೋಪಯೋಗಿ ವಸ್ತುಗಳ ತಯಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ, ಹಂದಿ ಸಾಕಾಣಿಕೆ, ಎಂಬ್ರಾಯ್ಡರಿ, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ, ಪ್ಲಂಬಿಂಗ್ ಮತ್ತು ಸ್ಯಾನಿಟರಿ, ಕಂಪ್ಯೂಟರ್ ಸ್ಟಿಕ್ಕರ್ ಕಟ್ಟಿಂಗ್ ಮುಂತಾದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭೋವಿ ಸಂಘದಲ್ಲಿ ಒಡಕು ಮೂಡಿಸುವ ಯತ್ನ: ಆರೋಪ
ಚಿಕ್ಕಮಗಳೂರು: ಒಂದು ಪಕ್ಷದ ಪರವಾಗಿ ಹೇಳಿಕೆ ನೀಡುವ ಮೂಲಕ ಚಿಕ್ಕಮಗಳೂರು ಜಿಲ್ಲಾ ಭೋವಿ ಸಂಘದಲ್ಲಿ ಒಡಕು ಯತ್ನವನ್ನು ಭೋವಿ ವಡ್ಡರ ಸಂಘದ ಅಧ್ಯಕ್ಷರು ಹುನ್ನಾರ ನಡೆಸಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಭೋವಿ ಸಂಘ ಅಧ್ಯಕ್ಷ ಹೊನ್ನಭೋವಿ ತಿರುಗೇಟು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಭೋವಿ ಸಂಘವನ್ನು ಅಸ್ತಿತ್ವಕ್ಕೆ ತರುವ ಮೊದಲು ಜಿಲ್ಲಾ ನೋಂದಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಜಿಲ್ಲಾ ಭೋವಿ ವಡ್ಡರ ಸಂಘ ಅಸ್ತಿತ್ವದಲ್ಲಿರುವುದು ಗಮನಕ್ಕೆ ಬಂದ ನಂತರ, ನಮ್ಮ ಜನಾಂಗದ ಜನರ ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿಗಾಗಿ ಚಿಕ್ಕಮಗಳೂರು ಜಿಲ್ಲಾ ಭೋವಿ ಸಂಘ ಅಸ್ತಿತ್ವಕ್ಕೆ ತರಲಾಗಿದೆ. ಜಿಲ್ಲಾ ಭೋವಿ ವಡ್ಡರ ಸಂಘಕ್ಕೂ ನಮ್ಮ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಭೋವಿ ಸಂಘ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ಇಲ್ಲದಿರುವುದನ್ನು ಈ ಜನಾಂಗದ ಹಿರಿಯರು ಮತ್ತು ಪ್ರಮುಖರೊಂದಿಗೆ ಸಮಾಲೋಚಿಸಿದ ನಂತರ ಭೋವಿ ಜನಾಂಗದವರ ಕ್ಷೇಮಾಭಿವೃದ್ಧಿಗಾಗಿ ಸಂಘ ಸ್ಥಾಪಿಸಲಾಗಿದೆ ಎಂದು ಹೇಳಿದಾ ್ದರೆ.
ಯುಗಾದಿ ಪ್ರಯುಕ್ತ ವಿಶೇಷ ಪೂಜೆ
ಚಿಕ್ಕಮಗಳೂರು: ಚಂದ್ರಮಾನ ಯುಗಾದಿ ಪ್ರಯುಕ್ತ ನಗರದ ಕಾಮಧೇನು ಕ್ಷೇತ್ರದಲ್ಲಿ ಮಾ. 31ರಂದು ವಿಶೇಷ ಪೂಜೆ ನಡೆಯಲಿದೆ. ಅಂದು ಬೆಳಗ್ಗೆ 6 ಗಂಟೆಗೆ ದೇವತೆಗಳಿಗೆ ಅಭ್ಯಂಜನಾಭಿಷೇಕ, ಪಂಚಾಮೃತಾಭಿಷೇಕ, ನೂತನ ವಸ್ತ್ರಧಾರಣೆ, ಸಹಸ್ರನಾಮ, ಪೂಜೆ, ದೇವರುಗಳಿಗೆ ವಿಶೇಷ ಅಲಂಕಾರ ಹಾಗೂ ಒಂದು ವರ್ಷದಿಂದ ನಡೆದು ಬಂದ ಮಾರುತಿ ಹೋಮದ ಪೂರ್ಣಾಹುತಿ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್. ನಂಜುಂಡಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಧನ್ವಂತರಿ ಮೃತ್ಯುಂಜಯ ಕಂಠೇಶ್ವರ ಸ್ವಾಮಿಗೆ ನೂತನವಾಗಿ ವಾರ್ಷಿಕ ಹೋಮ ಪ್ರಾರಂಭವಾಗಲಿದ್ದು, ಪ್ರತಿನಿತ್ಯ 8 ಗಂಟೆಗೆ ಹೋಮ ನಡೆಲಿದೆ. ಭಕ್ತಾದಿಗಳು ಕರಿ ಎಳ್ಳು, ತುಪ್ಪ, ಬತ್ತವನ್ನು ಹೋಮಕ್ಕೆ ತಂದುಕೊಡಬಹುದು. ನೂತನ ಸಂವತ್ಸರದ ಪಂಚಾಂಗ ಶ್ರವಣ ಸಂಜೆ 5 ಗಂಟೆಗೆ ರಘುನಾಥ ಅವಧಾನಿಗಳಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಶಂಗೇರಿ ಶಾರದಾ ಪೀಠದಲ್ಲಿ ರಾಮೋತ್ಸವ ನಾಳೆಯಿಂದ
ಶೃಂಗೇರಿ: ಇಲ್ಲಿನ ಶಾರದಾ ಪೀಠದಲ್ಲಿ ಸೋಮವಾರದಿಂದ ಶ್ರೀರಾಮ ವಸಂತ ನವರಾತ್ರಿ ಮಹೋತ್ಸವ ಕಾರ್ಯಕ್ರಮ ಸೋಮವಾರದಿಂದ ನಡೆಯಲಿದೆ. ಮಾ. 31 ರಿಂದ ಏಪ್ರಿಲ್ 8 ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮ ಇಂದು
ಶೃಂಗೇರಿ: ಇಲ್ಲಿನ ಶಾರದಾ ಪೀಠದಲ್ಲಿ ಮೈಸೂರು ಸಂಗೀತ ವಿದ್ಯಾಲಯದಿಂದ ಮೈಸೂರು ವಾಗ್ಗೇಯಕಾರರಿಗೆ ನಮನ ಯೋಜನೆ ಕಾರ್ಯಕ್ರಮ ರವಿವಾರ ನಡೆಯಲಿದೆ. ಸಂಜೆ 5 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಜಗದ್ಗುರು ಭಾರತೀ ತೀರ್ಥರು ಉದ್ಘಾಟಿಸಿ, ಅನುಗ್ರಹ ಭಾಷಣ ಮಾಡಲಿದ್ದಾರೆ. ಕಲಾ ವಿಮರ್ಷಕ ಡಾ.ಎಂ. ಸೂರ್ಯಪ್ರಸಾದ್ ಕರ್ನಾಟಕ ಸಂಗೀತಕ್ಕೆ ಮೈಸೂರು ವಾಗ್ಗೇಯಕಾರರ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮೈಸೂರು ವಾಗ್ಗೇಯಕಾರರ ಕೃತಿಗಳ ಗೋಷ್ಠಿ ಗಾಯನ ಕಾರ್ಯಕ್ರಮ ನಡೆಯಲಿದೆ.
ಸ್ಟಿಕ್ಕರ್ ತೆರವಿಗೆ ಬಜರಂಗದಳ ಆಗ್ರಹ
ಶಿವಮೊಗ್ಗ: ರಸ್ತೆ ಮಾರ್ಗಸೂಚಿ ಫಲಕಗಳ ಮೇಲೆ ಅಂಟಿಸಿರುವ ಸ್ಟಿಕ್ಕರ್ಗಳನ್ನು ತೆರವುಗೊಳಿಸುವಂತೆ ಬಜರಂಗದಳವು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಒತ್ತಾಯಿಸಿದೆ. ಶಿವಮೊಗ್ಗ ನಗರದಿಂದ ಹೊಳೆಹೊನ್ನೂರಿಗೆ ಹೋಗುವ ಮಾರ್ಗದಲ್ಲಿ ರಸ್ತೆ ನಿಯಮ ತೋರಿಸುವ ಫಲಕಗಳಿಗೆ ಕಿಡಿಗೇಡಿಗಳು ಇಂಗ್ಲಿಷ್ನಲ್ಲಿ ಜೀಸಸ್ ಎಂದಿರುವ ಸ್ಟಿಕರ್ಗಳನ್ನು ಅಂಟಿಸಿದ್ದಾರೆ. ಇದನ್ನು ತೆರವುಗೊಳಿಸುವಂತೆ ಸಂಘಟನೆಯ ಸದಸ್ಯರು ಮನವಿ ಸಲ್ಲಿಸಿ ಆಗ್ರಹಿಸಿದರು. ಒಂದು ಧರ್ಮದ ಪ್ರಚಾರ ಮಾಡಲು ಸರ್ಕಾರಿ ಸ್ವತ್ತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಸಮಾಜದ ಸ್ವಾಸ್ಥ್ಯ ಕದಡುವ ಕೆಲಸವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದು, ಅವನ್ನು ಪತ್ತೆ ಹಚ್ಚಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವ ಜತೆಗೆ ಅಂಟಿಸಿರುವ ಸ್ಟಿಕರ್ಗಳನ್ನು ತೆರವುಗೊಳಿಸುವಂತೆ ಸಂಘಟನೆಯ ದೀನದಯಾಳು, ಸದಾನಂದ, ಚಂದ್ರಶೇಖರ್, ಮಾಲತೇಶ್, ಜಗದೀಶ್ ಮತ್ತಿತರರು ಆಗ್ರಹಿಸಿದ್ದಾರೆ.
ಒಬ್ಬರು ಪರೀಕ್ಷೆ ಬರೆಯಲು 24 ಮಂದಿ ಕಾವಲು
ಆಯನೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಗುರುವಾರ ಆಯನೂರಿನ ಪರೀಕ್ಷಾ ಕೇಂದ್ರದಲ್ಲಿ ಒಬ್ಬರೇ ಅಭ್ಯರ್ಥಿ ಹಿಂದಿ ಪರೀಕ್ಷೆಗೆ ಹಾಜರಾದ ಪ್ರಸಂಗ ನಡೆದಿದೆ.
ಕುಂಸಿ, ಹಾರ್ನಹಳ್ಳಿ ಹಾಗೂ ಆಯನೂರು ವ್ಯಾಪ್ತಿಯ ಏಕೈಕ ಪರೀಕ್ಷಾ ಕೇಂದ್ರ ಆಯನೂರಿನಲ್ಲಿದ್ದು, ಒಬ್ಬರೇ ಮಹಿಳೆ ಪರೀಕ್ಷೆ ಬರೆದರು. ವಾಸ್ತವವಾಗಿ ಈ ಕೇಂದ್ರದಲ್ಲಿ ಇವರೊಬ್ಬರೇ ಪರೀಕ್ಷೆ ತೆಗೆದುಕೊಂಡಿದ್ದರು. ಅಲ್ಲದೇ ಇವರು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದರು.
ಇದಕ್ಕೆ ಸಾಕ್ಷಿಯಾಗಿದ್ದು ಮಾತ್ರ ಬರೋಬ್ಬರಿ 24 ಜನ. ಒಬ್ಬ ಪ್ರಾಂಶುಪಾಲರು, ಒಬ್ಬ ಪರೀಕ್ಷೆ ಅಧೀಕ್ಷಕರು, ಒಬ್ಬ ಸಹ ಮುಖ್ಯ ಅಧೀಕ್ಷಕರು, ಇಬ್ಬರು ವಿಶೇಷ ಜಾಗೃತ ದಳ ಸಿಬ್ಬಂದಿ, ಒಬ್ಬರು ಕೊಠಡಿ ಮೇಲ್ವಿಚಾರಕರು, ಶಿವಮೊಗ್ಗದಿಂದ ಪ್ರಶ್ನೆ ಪತ್ರಿಕೆ ತಂದುಕೊಟ್ಟು, ಉತ್ತರ ಪತ್ರಿಕೆ ತೆಗೆದುಕೊಂಡು ಹೋಗಲು ನಾಲ್ವರು, 11 ಉಪನ್ಯಾಸರು ಇರಬೇಕಾದ ಸಂದರ್ಭ ಒದಗಿತ್ತು.
ದುಡಿಮೆಯಷ್ಟೇ ಉಳಿತಾಯಕ್ಕೂ ಗಮನ ನೀಡಿ: ಕಾಮತ್
ಸೊರಬ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದುಡಿಮೆಯಷ್ಟೆ ಉಳಿತಾಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದು ಶಿವಮೊಗ್ಗ ಮುಖ್ಯ ಅಂಚೆ ಅಧೀಕ್ಷಕ ಚಂದ್ರಕಾಂತ ಕಾಮತ್ ತಿಳಿಸಿದರು. ತಾಲ್ಲೂಕಿನ ಹಾಲಗಳಲೆಯಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡಿದ್ದ ಗ್ರಾಮೀಣ ಅಂಚೆ ಜೀವ ವಿಮೆ ಮೇಳಾ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರು ಉಳಿತಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮುಂದಿನ ಜೀವನದ ಸಂಕಷ್ಟದ ಸಮಯದಲ್ಲಿ ನೆರವಾಗುತ್ತದೆ ಎಂದರು. ಮಾರುಕಟ್ಟೆ ನಿರ್ವಾಹಕ ಶಶಿಧರ್ ಪ್ರಸ್ತಾವಿಕವಾಗಿ ಮಾತನಾಡಿ, ಅಂಚೆ ವಿಮಾ ಮೇಳದ ಜಾಲವೂ ಭಾರತದ ಎಲ್ಲಾ ಗ್ರಾಮೀಣ ಪ್ರದೇಶದ ಭಾಗಗಳಿಗೆ ವ್ಯಾಪಿಸಿದ್ದು, 13 ವಿಮಾ ಸಂಸ್ಥೆಗಳಲ್ಲಿ ಶೇಕಡ 13 ಪಾಲನ್ನು ಅಂಚೆ ಇಲಾಖೆ ಹೊಂದಿದೆ ಎಂದರು. ಅಧ್ಯಕ್ಷತೆಯನ್ನು ಎಸ್.ಓ ಶಿವಪ್ಪ ವಹಿಸಿದ್ದರು. ಬಸವನಕಟ್ಟೆ ನರೇಂದ್ರನಾಯ್ಕ, ಶಾಂತಪ್ಪ, ಮಂಜುನಾಥ ಇತರರು ಇದ್ದರು.
ನೂತನ ಸೌಹಾರ್ದ ಸಹಕಾರಿ ಸಂಸ್ಥೆ ಅಸ್ತಿತ್ವಕ್ಕೆ
ಸಾಗರ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಕರ್ತವ್ಯನಿರತ ಸರ್ಕಾರಿ ನೌಕರರ ಉದ್ದೇಶಿತ ಸೌಹಾರ್ದ ಸಹಕಾರಿ ಸಂಸ್ಥೆ ಎಂಬ ನೂತನ ಸಹಕಾರಿ ಸಂಸ್ಥೆ ಸ್ಥಾಪಿಸಲಾಗುತ್ತಿದ್ದು, ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ಶಿವಮೊಗ್ಗ, ಭದ್ರಾವತಿ ತಾಲೂಕಿನ ಸರ್ಕಾರಿ ನೌಕರರು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು. ಸಹಕಾರಿ ಸಂಘದಲ್ಲಿ ಸದಸ್ಯರಾಗಬಯಸುವ ನೌಕರರು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರಬೇಕು. ಕೇಂದ್ರ ಹಾಗೂ ಅರೆಕಾಲಿಕ ಸರ್ಕಾರಿ ನೌಕರರಿಗೆ ಸದಸ್ಯತ್ವ ಪಡೆಯಲು ಅವಕಾಶ ಇರುವುದಿಲ್ಲ. ಪ್ರತಿಯೊಬ್ಬ ನೌಕರರು ಕನಿಷ್ಠ 20 ಷೇರು ಪಡೆಯಬಹುದು. ಸಾಮಾನ್ಯ ಸದಸ್ಯತ್ವ ಬಯಸುವ ನೌಕರರು ಏ. 25ರೊಳಗೆ ಸಂಪರ್ಕಿಸಬಹುದು. ಸಾಮಾನ್ಯ ಸದಸ್ಯತ್ವ ಪಡೆಯಲು ಸರ್ಕಾರಿ ನೌಕರರ ಸಂಘ, ವಿನೋಬಾ ನಗರ, ಸಾಗರ ಕಚೇರಿಯನ್ನು ಸಂಪರ್ಕಿಸಬಹುದು. ವಿವರಗಳಿಗಾಗಿ ನಾಗಭೂಷಣ್- 9481562306), ಜಿ.ಪರಮೇಶ್ವರ್-9449401554).
ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏ.3ರಿಂದ
ಶಿವಮೊಗ್ಗ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ, ಗೋಪಾಲಗೌಡ ಬಡಾವಣೆ, ಯುವ ಸಬಲೀಕರಣ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 3ರಿಂದ 3ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು 21 ದಿನಗಳ ಕಾಲ ಹಮ್ಮಿಕೊಂಡಿದೆ. ಈ ತರಬೇತಿ ಶಿಬಿರದಲ್ಲಿ 10ರಿಂದ 17 ವರ್ಷ ವಯೋವುತಿಯೊಳಗಿನ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿದೆ. ಈ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಹೆಚ್ಚಿನ ತರಬೇತಿಗಾಗಿ ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ವತಿಯಿಂದ ವರ್ಷಪೂರ್ತಿ ನಡೆಯುವ ಕ್ರಿಕೆಟ್ ತರಬೇತಿಗೆ ಆಯ್ಕೆ ಮಾಡಲಾಗುವುದು. ಈ ತರಬೇತಿಯ ಸದುಪಯೋಗ ಪಡೆಸಿಕೊಳ್ಳುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ದೂ.ಸಂ.9448256122, 8951399936 ಸಂಪರ್ಕಿಸಬಹುದು.
ಇಮ್ರಾನ್ ಮಸೂದ್ ಹೇಳಿಕೆಗೆ ಬಿಜೆಪಿ ಖಂಡನೆ
ಶಿವಮೊಗ್ಗ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಕತ್ತರಿಸಿ ಹಾಕುವೆ ಎಂದು ಹೇಳಿರುವ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅವರ ಅಭ್ಯರ್ಥಿತನವನ್ನು ರದ್ದು ಮಾಡಬೇಕೆಂದು ಮತ್ತು ಅವರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಭಾರತದ ಮೇಲೆ ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಿದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ, ಬಾಬರ್ ಅಂತಹವರ ಸಂತಾನದ ಶಿಶು ಕಾಂಗ್ರೆಸ್ನ ಇಮ್ರಾನ್ ಮಸೂದ್ ವಿರುದ್ಧ ಅಖಂಡ ಭಾರತದ ಜನತೆ ತಿರುಗೇಟು ನೀಡಲಿದ್ದಾರೆ. ಭಯೋತ್ಪಾದಕರಿಗೆ ಬಿರಿಯಾನಿ ಮತ್ತು ಜಾಮೀನು ನೀಡುವ ಕಾಂಗ್ರೆಸ್ ಸರ್ಕಾರ ದೇಶಪ್ರೇಮಿಗಳನ್ನು ಹತ್ಯೆಗೈಯುವುದಾಗಿ ಹೇಳಿರುವ ಇಮ್ರಾನ್ ಮಸೂದ್ ಪರವಾಗಿ ಮೃದು ಧೋರಣೆ ತೋರಿಸುತ್ತಿರುವುದು ಕಾಂಗ್ರೆಸ್ನ ಕೋಮುವಾದಿ ಧರ್ಮಾಂದತೆಯ, ಮಾನಸಿಕತೆಯ ಸ್ಥಿತಿ ದೇಶದ್ರೋಹಿ ಕೆಲಸ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ. ಶಂಕರ್ ತಿಳಿಸಿದ್ದಾರೆ.
ಕ್ಷೇತ್ರದ ವಿವಿಧೆಡೆ ಬಿಜೆಪಿ ಎಲ್ಇಡಿ ಪ್ರಚಾರ
ಶಿವಮೊಗ್ಗ: 2014ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯು ಆಧುನಿಕ ತಂತ್ರಜ್ಞಾನದೊಂದಿಗೆ ಬೃಹತ್ ಎಲ್.ಇ.ಡಿ. ಪರದೆಯ ಮೇಲೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವ ಚಲನಶೀಲ ಚಿಂತನೆಯೊಂದಿಗೆ ಈ ದೇಶದ ಬೆಳವಣಿಗೆಗೆ, ಗೌರವಕ್ಕೆ ಉಚ್ಛ್ರಾಯ ಸ್ಥಿತಿಯನ್ನು ಕೊಡುವ ದಿಕ್ಕಿನಲ್ಲಿ ತಮ್ಮ ಆಲೋಚನೆ ಆಶಯಗಳು ಹೇಗಿರಬೇಕೆಂದು ಅದಕ್ಕಾಗಿ ತಾವು ಬಿಜೆಪಿಯನ್ನು ಬೆಂಬಲಿಸಬೇಕೆಂದು ಈ ಬೃಹತ್ ಪರದೆಯ ಮೇಲೆ ಅನಾವರಣಗೊಳಿಸಿದ್ದಾರೆ. ಇದರ ಪ್ರಚಾರವು ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಆರಂಭವಾಗಿದ್ದು, ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನಡೆಯಲಿದೆ ಎಂದು ಪಕ್ಷದ ಮಾಧ್ಯಮ ಪ್ರಮುಖ ಮಧುಸೂದನ ಹೇಳಿದ್ದಾರೆ. ಮಾರ್ಚ್ 30 ಹಾಗೂ ಏಪ್ರಿಲ್ 9ರಂದು ತೀರ್ಥಹಳ್ಳಿ, ಮಾರ್ಚ್ 31 ಹಾಗೂ ಏಪ್ರಿಲ್ 1ರಂದು ಬೈಂದೂರು, ಏ.2 ಹಾಗೂ 10ರಂದು ಹೊಸನಗರ, ಏ.3 ಹಾಗೂ 11ರಂದು ಸಾಗರ, ಏ.4 ಮತ್ತು 12ರಂದು ಸೊರಬ, ಏ.5 ಹಾಗೂ 13ರಂದು ಶಿಕಾರಿಪುರದಲ್ಲಿ ಪ್ರದರ್ಶನ ನಡೆಯಲಿದೆ.
ಮಾವಿನ ತೋಪಿಗೆ ಬೆಂಕಿ: ಲಕ್ಷಾಂತರ ಹಾನಿ
ಸೊರಬ: ತಾಲೂಕಿನ ಆನವಟ್ಟಿ ಹೋಬಳಿ ಭಾರಂಗಿ ಗ್ರಾಮದ ಚನ್ನಬಸಪ್ಪ ಗೌಡ ಎಂಬವರ ಮಾವಿನ ತೋಪಿಗೆ ಬೆಂಕಿ ಬಿದ್ದು, ಲಕ್ಷಾಂತರ ರುಪಾಯಿ ನಷ್ಟವಾಗಿದೆ. ತಾಲೂಕಿನ ಗಡಿ ಗ್ರಾಮ ಭಾರಂಗಿಯ ಸರ್ಕಾರಿ ಜಮೀನಲ್ಲಿ ಬೆಳೆದ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಾಳಿಯು ಹೆಚ್ಚಾಗಿದ್ದರಿಂದ ಪಕ್ಕದಲ್ಲಿದ್ದ 17 ಎಕರೆಯಲ್ಲಿನ ಸುಮಾರು 550- 600 ಫಲಭರಿತ ಮಾವಿನ ಗಿಡಗಳು ಬೆಂಕಿಗೆ ಆಹುತಿಯಾಗಿ ಕಂದಿಹೋಗಿವೆ. ಕಂದಾಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಭಾರಂಗಿ ಗಡಿ ಗ್ರಾಮವಾಗಿದ್ದು, ತಾಲೂಕು ಕೇಂದ್ರಕ್ಕೆ ಸುಮಾರು 45 ಕಿಮೀ ದೂರದಲ್ಲಿದೆ. ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚಾರವೂ ಇಲ್ಲ. ರಸ್ತೆಗಳೂ ಗುಂಡಿ ಬಿದ್ದಿವೆ. ಸರ್ಕಾರದ ಸವಲತ್ತುಗಳು ಸಹ ಹೆಚ್ಚಿನ ಪಾಲು ಸಿಗದೇ ಮರೀಚಿಕೆಯಾಗುತ್ತಿದೆ. ಇದರಿಂದಾಗಿ ಅವಘಡಗಳು ಸಂಭವಿಸಿದಾಗ ಅತೀವ ರೋಗದಿಂದ ಬಳಲುತ್ತಿರುವವರಿಗೆ ನಿಗದಿತ ಸಮಯಕ್ಕೆ ಸೇವೆ ಸಿಗುತ್ತಿಲ್ಲ. ಆನವಟ್ಟಿಯಲ್ಲಿನ ಆಸ್ಪತ್ರೆ ಹಾಗೂ ಅಗ್ನಿಶಾಮಕ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಏ.1ರಿಂದ ಉಚಿತ ತರಬೇತಿ ಶಿಬಿರ
ಸಾಗರ: ಇಲ್ಲಿನ ವನಶ್ರೀ ಟ್ರಸ್ಟ್ ಹಾಗೂ ಬೆಂಗಳೂರಿನ ಕಲೆಕ್ಟ್ ಫೌಂಡೇಶನ್ ಹಾಗೂ ಶ್ರೀ ವೀರಾಂಜನೇಯ ಶೈಕ್ಷಣಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ಶ್ರೀ ಮಾರುತಿ ಗುರೂಜಿ ಅವರ ಮಾರ್ಗದರ್ಶನದಲ್ಲಿ ಉಚಿತ ತರಬೇತಿ ಹಾಗೂ ವಿಶೇಷ ಕೊಡುಗೆ ಕಾರ್ಯಕ್ರಮವನ್ನು ಬಂಗಾರಮಕ್ಕಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ. ತೇರ್ಗಡೆಯಾದ 16 ರಿಂದ 30 ವರ್ಷ ವಯಸ್ಸಿನೊಳಗಿನ ಯುವಕ ಯುವತಿಯರಿಗೆ ಏ.1 ರಿಂದ ಏ. 16ರವರೆಗೆ ಸನಿವಾಸ ತರಬೇತಿ ಶಿಬಿರ ಏರ್ಪಡಿಸಿದೆ. ಡ್ರೈವಿಂಗ್, ಕಂಪ್ಯೂಟರ್, ಮಾರುಕಟ್ಟೆ, ಜೇಮ್ಸ್ ಎಂಡ್ ಜ್ಯುವೆಲ್, ಬ್ಯಾಂಕಿಂಗ್, ಆಟೋಮೊಬೈಲಲ್ಕುರಿತು ತರಬೇತಿ ನೀಡಲಾಗುವುದು. ಏ.1ರಿಂದ ಏ. 10ರವರೆಗೆ ಹೆಣ್ಣುಮಕ್ಕಳಿಗೆ ತರಬೇತಿ ಹಾಗೂ ಏ.8 ರಿಂದ ಏ. 16ವರೆಗೆ ಗಂಡು ಮಕ್ಕಳಿಗೆ ತರಬೇತಿ ಶಿಬಿರ ಇರುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ತರಬೇತಿಯ ನಂತರ 1 ಸಾವಿರ ರೂ. ಗೌರವಧನ ನೀಡಲಾಗುವುದು.
'ಮಾಧ್ಯಮಗಳಿಂದ ಉತ್ತಮ ಕೊಡುಗೆ ಅನಿವಾರ್ಯ'
ಶಿವಮೊಗ್ಗ: ಮಾಧ್ಯಮಗಳು ಇಂದು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ಅನಿವಾರ್ಯತೆ ಇದೆ. ಮಾಧ್ಯಮಗಳು ಸಮಾಜದ ಒಂದು ಅಂಗವಾಗಿರುವುದರಿಂದ ಜನತಾಂತ್ರಿಕ ಸೂತ್ರವನ್ನು ಅಳವಡಿಸಿಕೊಳ್ಳುವುದರ ಮೂಲಕ ಜನರನ್ನು ಮುಟ್ಟಲು ಪ್ರಯತ್ನಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಯದ ಹಿರಿಯ ಪ್ರಾಧ್ಯಾಪಕಿ ಪ್ರೊ. ಉಷಾರಾಣಿ ಅಭಿಪ್ರಾಯ ಪಟ್ಟರು. ಅವರು ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ ಸಮಕಾಲಿನ ಸಮೂಹ ಮಾಧ್ಯಮದಲ್ಲಿ ಸಮಾಜ ಮತ್ತು ಸಮೂಹ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಾಧ್ಯಮಗಳು ಜವಾಬ್ದಾರಿಯನ್ನು ಮರೆಯುತ್ತಿವೆ. ಸುದ್ದಿಯ ಗುಣಮಟ್ಟ ಕುಸಿಯುತ್ತಿದೆ ಎಂದ ಅವರು, ಸುದ್ದಿ ಮತ್ತು ತನಿಖಾ ವರದಿಯಲ್ಲಿ ಪಾರದರ್ಶಕತೆ ಅಗತ್ಯ, ಆದರೆ ಲಾಭಗಳಿಕೆ ಮಾತ್ರ ಮಾಧ್ಯಮದ ಉದ್ದೇಶವಾಗುತ್ತಿದೆ ಎಂದರು. ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ಮುಖ್ಯಸ್ಥ ಪ್ರೊ. ಮಹೇಶ್ಚಂದ್ರ ಗುರು ಮತ್ತಿತರರು ಉಪಸ್ಥಿತರಿದ್ದರು.