ಹಣ ನೀಡಿದರೆ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆ
ಕಡೂರು: ಬರ ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಬಾರದಿದ್ದು, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ 3.25 ಕೋಟಿ ಪ್ರಸ್ತಾವನೆಗೆ ಒಂದು ರುಪಾಯಿ ಸಹ ಬಿಡುಗಡೆ ಮಾಡದಿದ್ದರೂ ಹೊಸ ಕೊಳವೆಬಾವಿ ಕೊರೆಸಿದ್ದೇನೆ. ಕಾಂಗ್ರೆಸ್ ಮುಖಂಡರು ತಮ್ಮದೇ ಸರ್ಕಾರದಿಂದ ಬರದ ಅನುದಾನ ಕೊಡಿಸಿದಲ್ಲಿ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಬರ ಕಾಮಗಾರಿಯ 3.25 ಕೋಟಿ ಕ್ರಿಯಾಶೀಲ ಯೋಜನೆಗೆ ಒಂದು ರುಪಾಯಿ ಬಿಡುಗಡೆ ಮಾಡಿಲ್ಲ. ಹೊಸ ಕೊಳವೆಬಾವಿ ಕೊರೆಸಲು ಅನುಮತಿ ನೀಡುವಂತೆ ಬರ ಪ್ರದೇಶದ ಶಾಸಕರೆಲ್ಲ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದರಿಂದ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದರು. ಆದರೆ, ಜಿಲ್ಲಾಧಿಕಾರಿ ಲಿಖಿತ ಆದೇಶ ಬಂದಿಲ್ಲವೆಂದು ಹೇಳಿ 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದರೂ ಹೊಸ ಕೊಳವೆಬಾವಿಗೆ ಅವಕಾಶವಿಲ್ಲ ಎಂದರು.
90 ಕೊಳವೆಬಾವಿ: ತಾವು 128 ಹೊಸ ಕೊಳವೆಬಾವಿಗೆ ಸಲ್ಲಿಸಿದ ಪ್ರಸ್ತಾವನೆಗೂ ಹಣ ಬಿಡುಗಡೆ ಮಾಡಿಲ್ಲ. ಆದರೂ ತಾವು 90 ಕಡೆ ಕೊಳವೆಬಾವಿ ಕೊರೆಸಿದ್ದು, ಇನ್ನು ಕೇವಲ 38 ಕಡೆ ಬಾಕಿಯಿದೆ. ಗುತ್ತಿಗೆದಾರರ ಬಾಕಿ ಹೆಚ್ಚುತ್ತಿದ್ದರೂ ನನ್ನ ಒತ್ತಾಯದ ಮೇಲೆ ಕೊಳವೆಬಾವಿ ಕೊರೆಯುತ್ತಿದ್ದಾರೆ. ಶಾಸಕರು ಕ್ಷೇತ್ರಕ್ಕೆ ಏನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮಹೇಶ್ವರಪ್ಪ, ಕೆ.ವಿ. ವಾಸು, ಸೀಗೇಹಡ್ಲು ಹರೀಶ್ ಇತರರು ಇದ್ದರು.