ಕಸ ಬೇರೆಡೆ ಹಾಕಲು ಆಗ್ರಹ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಕಾವೇರುತ್ತಿದೆ. ಸಾಂಕ್ರಾಮಿಕ ರೋಗದ ಭೀತಿ ಎಲ್ಲೆಡೆ ಎದುರಾಗಿದೆ.
ನಗರದಲ್ಲಿ ಶುಚಿತ್ವ ಕಾಪಾಡಬೇಕಾಗಿರುವ ಚಿಕ್ಕಮಗಳೂರು ನಗರಸಭೆ, ತನ್ನ ಕಚೇರಿಯ ಆವರಣದಲ್ಲಿಯೇ ಶುಚಿತ್ವ ಕಾಪಾಡುವಲ್ಲಿ ವಿಫಲವಾಗಿದೆ.
ನಗರದಲ್ಲಿ ಸಂಗ್ರಹ ಆಗುತ್ತಿರುವ ಕಸವನ್ನು ಕಚೇರಿಯ ಆವರಣದಲ್ಲಿ ತಂದು ಹಾಕಲಾಗುತ್ತಿದೆ. ಕರಗದ ಹಾಗೂ ಕರಗುವ ಕಸವನ್ನು ವಿಂಗಡಣೆ ಮಾಡಲು ಕ್ರಮ ವಹಿಸಿದೆ. ಇದೊಂದು ಒಳ್ಳೆಯ ಕೆಲಸವೇ ಸರಿ. ಆದರೆ, ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ನಗರಸಭೆ ಗಮನ ಹರಿಸಬೇಕು.
ಕಸ ವಿಂಗಡಣೆಗೆ ನಗರಸಭೆ ತನ್ನ ಕಚೇರಿಯ ಆವರಣವನ್ನು ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ. ಕಸ ವಿಲೇವಾರಿಗಾಗಿ ಇಂದಾವರದಲ್ಲಿ ನಗರಸಭೆ ಜಾಗವನ್ನು ಗುರುತು ಮಾಡಿದ್ದು, ಅಲ್ಲಿ ಈ ಕಸವನ್ನು ಹಾಕಿ ಅಲ್ಲೇ ವಿಂಗಡಣೆ ಮಾಡಿದರೆ, ಜನರಿಗೆ ಆಗುತ್ತಿರುವ ಅನನುಕೂಲ ತಪ್ಪಿಸಬಹುದು. ಈ ನಿಟ್ಟಿನಲ್ಲಿ ನಗರಸಭೆ ಮುಂದಾಗಬೇಕು.
- ಸಂತೋಷ್, ಚಿಕ್ಕಮಗಳೂರು.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸ್ತ್ರೀಗೆ ಬ್ರಹ್ಮಾಸ್ತ್ರದಂತೆ
ಕಡೂರು: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ 2005ರಲ್ಲಿ ಮಹಿಳೆಯರ ರಕ್ಷಣೆಗಾಗಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ ಎಂದು ವಕೀಲ ಸೂರಿ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಲಯನ್ಸ್ ಕ್ಲಬ್ ಆವರಣದಲ್ಲಿ ಜರುಗಿದ ಸಹಭಾಗಿನಿ ಯೋಜನೆಯಡಿ ದೌರ್ಜನ್ಯಕ್ಕೆ ಒಳಗಾದ ಹಾಗೂ ಸಂತ್ರಸ್ತ ಮಹಿಳೆಯರಿಗೆ ಆಯೋಜಿಸಿದ್ದ ಸಮುದಾಯ ಮಹಿಳೆಯರ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆಪ್ತ ಸಮಾಲೋಚಕರಾದ ಡಾ. ತೀರ್ಥನಾಥ್ ಮಾತನಾಡಿದರು. ಪೊಲೀಸ್ ಇಲಾಖೆಯ ಹಾಲಮ್ಮ ಸ್ತ್ರೀಯರ ಪರವಾಗಿ ಇರುವ ಕಾನೂನುಗಳ ರಕ್ಷಣೆಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಬಿ.ಆರ್.ಪಿ. ಇಂದಿರಾ ಪ್ರತಿ ಮಗುವಿಗೆ ಶೈಕ್ಷಣಿಕವಾದ ಹಕ್ಕುಗಳಿದ್ದು ಅವನ್ನು ಸರಿಯಾಗಿ ಬಳಸಿಕೊಳ್ಳುವಂತೆ ತಿಳಿಸಿದರು. ಎಚ್‌ಐವಿ ಬಗ್ಗೆ ಕಡೂರು ಸರ್ಕಾರಿ ಆಸ್ಪತ್ರೆ ಆಪ್ತ ಸಮಾಲೋಚಕ ಚಂದ್ರಕುಮಾರ್, ಸಹಭಾಗಿನಿ ಯೋಜನಾ ನಿರ್ದೇಶಕಿ ಮಂಜುಳಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಶ್ರೀಧರ್ ಪಾಟೀಲ್ ನಿರೂಪಿಸಿ, ಅಶೋಕ್ ಸ್ವಾಗತಿಸಿದರು. ಸತೀಶ್ ಮೈತ್ರಿ ವಂದಿಸಿದರು.
ಪಂಚಾಂಗ ಶ್ರವಣ ಕಾರ್ಯಕ್ರಮ ಇಂದು
ನರಸಿಂಹರಾಜಪುರ: ಯುಗಾದಿಯ ದಿನವಾದ ಸೋಮವಾರ ಸಂಜೆ 5.30 ಗಂಟೆಗೆ ಹೊಸ ವರ್ಷದ ಪಂಚಾಂಗ ಶ್ರವಣ ಕಾರ್ಯಕ್ರಮವು ಓಂ ಶ್ರೀ ಸುಬ್ರಮಣ್ಯ ಟೆಂಪಲ್ ಟ್ರಸ್ಟ್ ಆಶ್ರಯದಲ್ಲಿ ಅಗ್ರಹಾರದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿ.ಎಸ್. ಕೃಷ್ಣಭಟ್ ನಡೆಸಿಕೊಡಲಿದ್ದು, ಆಸಕ್ತರು ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ಅಧ್ಯಕ್ಷರಾಗಿ ಆಯ್ಕೆ
ಶೃಂಗೇರಿ: ಮಾನವ ಹಕ್ಕು ಸಂಘಟನೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಜೆ. ಗಿರಿಧರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಶೋಭಾ ಅನಂತಯ್ಯ ಅವರು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇತ್ತಿಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ನಿಸಾರ್ ಅಹ್ಮದ್, ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವ್ಯಕ್ತಿ ಶವ ಪತ್ತೆ
ಬಾಳೆಹೊನ್ನೂರು: ಇಲ್ಲಿನ ಬಾಳೆಹೊನ್ನೂರು- ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ಭದ್ರಾ ಸೇತುವೆ ಕೆಳಭಾಗದಲ್ಲಿ ಶನಿವಾರ ಶವ ಪತ್ತೆಯಾಗಿದ್ದು, ಮೃತಪಟ್ಟವರನ್ನು ಶಾಂತಿನಗರದ ಟೈಲರ್ ಎಂ. ಭೋಜ (72) ಎಂದು ಗುರುತಿಸಲಾಗಿದೆ. ದೂರು ದಾಖಲಾಗಿದೆ.