ನೀರು ಕೊಡದಿದ್ದರೆ ಮತದಾನ ಬಹಿಷ್ಕಾರ: ಎಚ್ಚರಿಕೆ
ನರಸಿಂಹರಾಜಪುರದ ರಾಜೀವ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ.
ರಾಜೀವ್ ನಗರದಲ್ಲಿ 75 ರಿಂದ 80 ಮನೆಗಳಿದ್ದು, ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಹಿಂದೆ ಕೊಳವೆ ಬಾವಿ ಇತ್ತು. ಇದರಿಂದ ಓವರ್‌ಹೆಡ್ ಟ್ಯಾಂಕಿಗೆ ನೀರು ತುಂಬಿಸಿ ಬಡಾವಣೆಗೆ ಬೇಕಾದಷ್ಟು ನೀರನ್ನು ನೀಡಲಾಗುತ್ತಿತ್ತು. ಕಳೆದ 5 ವರ್ಷದ ಹಿಂದೆ ಕೊಳವೆ ಬಾವಿ ಹಾಳಾಗಿದ್ದು, ಅದನ್ನು ದುರಸ್ತಿ ಮಾಡಿಲ್ಲ. ನಂತರದ ದಿನಗಳಲ್ಲಿ ಓವರ್‌ಹೆಡ್ ಟ್ಯಾಂಕ್ ಸಹ ಬಿರುಕು ಬಿಟ್ಟು ಹಾಳಾಯಿತು. ಆ ಸಮಯದಲ್ಲಿ ಡಿಪೋ ರಸ್ತೆಯಲ್ಲಿರುವ ನೀರಿನ ಟ್ಯಾಂಕ್‌ನಿಂದ ಪೈಪ್ ಮೂಲಕ ರಾಜೀವ್ ನಗರಕ್ಕೆ ಕುಡಿಯುವ ನೀರು ನೀಡಲಾಗುತ್ತಿದೆ. ಆದರೆ, ಬೆಳಗಿನ ಅರ್ಧ ಗಂಟೆ ನೀರು ಬಂದು ನಿಂತು ಹೋಗುತ್ತದೆ. ಕರೆಂಟು ಇದ್ದಾಗ ಮಾತ್ರ ಕುಡಿಯುವ ನೀರು ಬರುತ್ತದೆ. ಕರೆಂಟು ಇಲ್ಲದೆ ಇದ್ದಾಗ ನೀರು ಬರುವುದಿಲ್ಲ. ಕಳೆದ 7 -8 ತಿಂಗಳಿಂದ ಇದೇ ರೀತಿ ಸಮಸ್ಯೆಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶೀಘ್ರಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇವೆ
- ವಹೀದಾ ಮತ್ತು ನಿವಾಸಿಗಳು, ನರಸಿಂಹಪುರ
ವಿದ್ಯುತ್ ಕಣ್ಣಾಮುಚ್ಚಾಲೆ
ತರೀಕೆರೆ ಪಟ್ಟಣದಲ್ಲಿ ಯಾವಾಗ ಕರೆಂಟು ಹೋಗುತ್ತದೆ. ಯಾವಾಗ ಬರುತ್ತದೆ ಎಂದು ನಿಖರವಾಗಿ ಹೇಳುವುದೇ ಕಷ್ಟವಾಗಿದೆ. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ವಿದ್ಯುತ್ ಇರುವುದಕ್ಕಿಂತ ಇಲ್ಲದಿರುವ ವೇಳೆಯೇ ಹೆಚ್ಚು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಕರೆಂಟ್ ನೀಡಲು ಮನವಿ ಮಾಡುತ್ತೇವೆ.
-ವಿನಾಯಕ, ತರೀಕೆರೆ