ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಾಲಸುಬ್ರಹ್ಮಣ್ಯಂ ವರದಿ ತಿರಸ್ಕರಿಸಿ

Rashmi Kasaragodu
Updated On : 31 Mar 2014, 2:02 am

ಚಿಕ್ಕಮಗಳೂರು: ಬಾಲಸುಬ್ರಹ್ಮಣ್ಯಂ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಕೊಪ್ಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಅನಧಿಕೃತ ಸಾಗುವಳಿ ಮಾಡಿರುವ ಹಾಗೂ ಅನಧಿಕೃತ ಗೃಹ ನಿರ್ಮಾಣ ಮಾಡಿರುವ ಅಡಕೆ, ಕಾಫಿ, ಬತ್ತ, ತೆಂಗು, ಏಲಕ್ಕಿ, ಬಾಳೆ ಹಾಗೂ ರಬ್ಬರ್ ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ಹಾಗೂ ಬಿಪಿಎಲ್ ಕುಟುಂಬದವರನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಪ್ರಕಾರ ಸಕ್ರಮಗೊಳಿಸಬೇಕೆಂದು ಒತ್ತಾಯಿಸಿದರು.
ಹಕ್ಕು ಪತ್ರ ನೀಡಿ: ಫಾರಂ ನಂ. 50- 53ರಲ್ಲಿ ಸಲ್ಲಿಸಿರುವ ಅರ್ಜಿ ಹಾಗೂ ಅಕ್ರಮ ಸಕ್ರಮೀಕರಣ ಸಮಿತಿ ಮುಂದೆ ಕಾಯ್ದಿರಿಸಿರುವ ಎಲ್ಲಾ ಅರ್ಜಿ ಸಕ್ರಮಗೊಳಿಸಲು ಸೂಚಿಸಬೇಕು. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಅರಣ್ಯ ಹಕ್ಕು ಕಾಯ್ದೆ 2006 ಹಾಗೂ ನಿಯಮ 2008ರ ಪ್ರಕಾರ ಹರಿಜನ, ಗಿರಿಜನ ಹಾಗೂ ಇತರ ಜನಾಂಗದವರು ಪಾರಂಪರಿಕವಾಗಿ ಅನುಭವಿಸುತ್ತಿರುವ ಅರಣ್ಯ ಅಕ್ರಮ ಸಾಗುವಳಿಯನ್ನು ಹಾಗೂ ಕಳಸ ಇನಾಂ ಸಂತ್ರಸ್ತರನ್ನು ಸೇರಿ ಈ ಕಾಯ್ದೆಯಡಿ ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು.
ಪಶ್ಚಿಮಘಟ್ಟ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್ ವರದಿಯಲ್ಲಿ ರಾಜ್ಯದ ಬಹು ಭಾಗ ಅಳವಡಿಸಿದ್ದು, ಕೇರಳ ಮಾದರಿಯಲ್ಲಿ (3,000 ಚ.ಕಿ.ಮೀ. ವಿನಾಯಿತಿ) ಈ ವರದಿಯ ಶಿಫಾರಸ್ಸಿಗೆ ರಾಜ್ಯ ಆಕ್ಷೇಪ ಸಲ್ಲಿಸಿ ವಿನಾಯಿತಿ ಒದಗಿಸಬೇಕು ಎಂದು ಆಗ್ರಹಿಸಿದರು.
ಸಾಲ ಮನ್ನಾ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಲು ಸರ್ಕಾರಗಳಿಗೆ ಕಷ್ಟವಾಗಿರಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹೊರೆಯಾಗದಂತೆ ಬ್ಯಾಂಕ್ ಗಳಿಗೆ ನಷ್ಟವಾಗದಂತೆ ಅಡಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಜಿಬಿಎಫ್ ಯೋಜನೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳು, ರಾಷ್ಟ್ರೀಕೃತ ಬ್ಯಾಂಕ್- ಸಹಕಾರಿ ಬ್ಯಾಂಕ್‌ಗಳು ತಲಾ ಶೇ. 25ರಷ್ಟು ಅನುದಾನ ನೀಡಬೇಕು. ಇನ್ನುಳಿದ ಶೇ. 25ರಷ್ಟು ಸಾಲವನ್ನು ಅಡಕೆ ಬೆಳೆಗಾರರೆ ಪಾವತಿಸುವ ಯೋಜನೆ ರೂಪಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಸಚಿನ್ ಮೀಗಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement