ದೈವ ಪಲ್ಲಕ್ಕಿ ಬರಲೆಂದು ಮುಳ್ಳಿನ ಗಿಡದ ಮೇಲೆ ಮಲಗಿದ ಸ್ವಾಮಿ!
ಅಥಣಿ: ದೇವರ ಪಲ್ಲಕ್ಕಿಯೇ ನನ್ನ ಭೇಟಿಗೆ ಬರಬೇಕು ಎಂದು ಒತ್ತಾಯಿಸಿ 4 ದಿನಗಳಿಂದ ತಾಲೂಕಿನ ಜಂಬಗಿ ಗ್ರಾಮದ ಬಳಿ ರಸ್ತೆ ಬದಿಯ ಮುಳ್ಳಿನ ಗಿಡದ ಮೇಲೆ ಮಲಗಿದ್ದ ಸ್ವಯಂ ಘೋಷಿತ ಸ್ವಾಮೀಜಿಯೊಬ್ಬನನ್ನು ಕೊನೆಗೂ ಪೊಲೀಸರು ಮನವೊಲಿಸಿ ಕೆಳಗಿಳಿಸಿದ್ದಾರೆ.
ಜಂಬಗಿ ಗ್ರಾಮದ ಸ್ವಯಂ ಘೋಷಿತ ಸ್ವಾಮೀಜಿ ಸುರೇಶ (ಮಹಾರಾಜ) ಮಲ್ಲಪ್ಪ ಖಾಂಡೇಕರ (25) ಬಿಕಾಂ ಪದವೀದರ. ಎರಡು ವರ್ಷದಿಂದ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಮುದಬಾವಿ ಗ್ರಾಮದ ಶ್ರೀ ಸಿದ್ಧೇಶ್ವರ ಪಲ್ಲಕ್ಕಿ ನನ್ನ ಭೇಟಿಗೆ ಬರಬೇಕೆಂಬುದು ಖಾಂಡೇಕರ ಬೇಡಿಕೆಯಾಗಿತ್ತು. ಕಳೆದ ವರ್ಷ ಇದೇ ರೀತಿ ಮುಳ್ಳಿನ ಗಿಡದ ಮೇಲೆ ಮಲಗಿದ್ದ. ಆಗ ಮದಬಾವಿಯ ಭಕ್ತರು ಮುಂದಿನ ವರ್ಷ ದೇವರ ಪಲ್ಲಕ್ಕಿ ತರುವುದಾಗಿ ಭರವಸೆ ನೀಡಿದ್ದರು. ಅದನ್ನು ಈ ವರ್ಷ ಈಡೇರಿಸಲಿಲ್ಲ ಎನ್ನುವ ಕಾರಣದಿಂದ ಮತ್ತೆ ಈ ವರ್ಷ ಆಹಾರ, ನೀರು ತ್ಯಜಿಸಿ ಮುಳ್ಳಿನ ಗಿಡದ ಮೇಲೆ ಮಲಗಿದ್ದ. ಕೊನೆಯವರೆಗೂ ಮದಬಾವಿ ಗ್ರಾಮದ ಶ್ರೀ ಸಿದ್ಧೇಶ್ವರ ಪಲ್ಲಕ್ಕಿ ಬಾರದೇ ಅಥಣಿ ಪೊಲೀಸರು ಬಂದು ಮುಳ್ಳು ಗಿಡದ ಮೇಲೆ ಮಲಗಿದ್ದವನಮನವೊಲಿಸಿ ಕೆಳಗಿಳಿಸಿದ್ದಾರೆ.