ಧರೆಗುರುಳಿದ ಬಾಳೆ
ನರಸಿಂಹರಾಜಪುರ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೇಂದ್ರ ಬಾಳೆ ಉರುಳಿ ಬಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮಂಗಳವಾರ ಸಂಜೆ 7 ಗಂಟೆಯಿಂದ 10 ಗಂಟೆಯವರೆಗೂ ಗುಡುಗು, ಮಿಂಚು ಗಾಳಿಯೊಂದಿಗೆ ಸುರಿದ ಭಾರಿ ಮಳೆಗೆ ತಾಲೂಕಿನ ರಾವೂರು ಗ್ರಾಮದ ತಿರುಪತಿ ಮಂಜು ಎಂಬುವರ ರಬ್ಬರ್ ತೋಟದ ಒಳಗೆ ನೆಟ್ಟಿದ್ದ 3 ಸಾವಿರ ನೇಂದ್ರ ಬಾಳೆ ಕೊನೆ ಸಹಿತ ಉರುಳಿ ಬಿದ್ದಿದ್ದು, ಲಕ್ಷಾಂತರ ರು. ನಷ್ಟ ಉಂಟಾಗಿದೆ. ಹಿಳುವಳಿ ಗ್ರಾಮದ ಸಿಜು ಎಂಬುವರ ತೋಟದ ನೇಂದ್ರ ಬಾಳೆ ಸಾಲು, ಸಾಲಾಗಿ ಉರುಳಿ ಬಿದ್ದು, ನಷ್ಚ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿ ರಬ್ಬರ್ ಮರಗಳೂ ಉರುಳಿ ಬಿದ್ದಿವೆ.
ಜೈಲ್ ರಸ್ತೆಯಲ್ಲಿದ್ದ ಬಿಎಸ್ಸೆನ್ನೆಲ್ ಕೇಂದ್ರದ ಸಮೀಪ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಮೇಲೆ ಒಣಗಿದ ಮರವೊಂದು ಬಿದ್ದು, ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಗಾಳಿಯಿಂದಾಗಿ ಗ್ರಾಮಾಂತರ ರಸ್ತೆಗಳಲ್ಲಿ ಬಿದಿರು, ಮರದ ಗೆಲ್ಲುಗಳು ಉರುಳಿ ಬಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.