ವಚನ ಸಾಹಿತ್ಯದಿಂದ ಬದುಕಿನ ಸುಧಾರಣೆ: ಮುರುಘಾ ಶ್ರೀ
ಚಿಕ್ಕಮಗಳೂರು: ವಚನ ಸಾಹಿತ್ಯದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು. ವಚನ ಸಾಹಿತ್ಯ ಅಧ್ಯಯನ ಮಾಡಿಕೊಂಡು ನಮ್ಮ ಬದುಕನ್ನು ಸುಧಾರಿಸಿ ಕೊಳ್ಳಬೇಕೆಂದು ಆನಂದಪುರ ಶ್ರೀ ಮುರುಘಾ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ತರೀಕೆರೆ ತಾಲೂಕಿನ ಗೌರಾಪುರದ ಶ್ರೀ ಚನ್ನಬಸವೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನವು ಗುರುವಾರ ಆಯೋಜಿಸಿದ್ದ ಆನಂದಪುರದ ಜಗದ್ಗುರು ಲಿಂಗೈಕ್ಯ ಶ್ರೀ ಮುದ್ದವೀರಸ್ವಾಮಿ ಸ್ಮಾರಕ ಶಿವಾನುಭವ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನಸ್ಸಿನೊಂದಿಗೆ ಮಾತನಾಡುವ ಮೂಲಕ ಆತ್ಮಾವಲೋಕನ ಶರಣರ ಅನುಸರಣೆ. ಜೀವನ ವಿಚಿತ್ರ, ಎಲ್ಲವೂ ಇದೆ. ಒಳಿತು- ಕೆಡುಕು ವಿವೇಚನ ಅರಿಯಬೇಕು. ವಿಚಾರಬಂದು ವಿವೇಕ ಕಳೆದುಕೊಂಡಿದ್ದೇವೆ. ಸುರಕ್ಷತೆ ಇಲ್ಲದೆ ನಮ್ಮ ಬಗ್ಗೆ ನಾವೇ ನಂಬಿಕೆ ಕಳೆದುಕೊಂಡಿದ್ದೇವೆ. ಇಂತಹ ಸ್ಥಿತಿಯಲ್ಲಿ ಸಕಲರಿಗೂ ಲೇಸನ್ನೆ ಬಯಸಿದ ಶರಣರ ಅಣಿಮುತ್ತುಗಳು ಮಾರ್ಗದರ್ಶಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಬಸವಕೇಂದ್ರ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಒಳಿತನ್ನು ನೋಡುವ ಕಣ್ಣು, ಗ್ರಹಿಸುವ ಮನಸ್ಸು ನಮ್ಮದಾದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಗುರು- ಶಿಷ್ಯರ ಬಾಂಧವ್ಯಕ್ಕೆ ಗೌರಾಪುರ ಹಾಗೂ ಮುದ್ದವೀರ ಸ್ವಾಮಿಗಳ ನಡುವಿನ ಅನುಬಂಧ ಮಾದರಿಯಾಗಿದೆ. ವ್ಯಕ್ತಿಗಳಲ್ಲಿರುವ ಒಳಿತನ್ನು ಗುರುತಿಸುವುದರಿಂದ ಅವನ ಒಳ್ಳೆತನವನ್ನು ಹೆಚ್ಚಿಸಬಹುದು. ಸುಸಂಸ್ಕೃತ ವಾತಾವರಣ ನಿರ್ಮಾಣ ಮಾಡಲು ಕೆಟ್ಟದ್ದಕ್ಕಿಂತ ಒಳ್ಳೆಯ ಅಂಶಗಳ ಬಗ್ಗೆ ಮಾತು, ಚರ್ಚೆ, ಚಿಂತನೆ, ಪ್ರಚಾರ ಹೆಚ್ಚಾಗಬೇಕು ಎಂದು ಹೇಳಿದರು.
ಮಕ್ಕಳಿಗೆ ಸಂಸ್ಕಾರ ಅಗತ್ಯ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಮಾತನಾಡಿ, ಶರವೇಗದ ಬದುಕಿನಲ್ಲಿ ಪ್ರತಾಪಕ್ಕೆ ಬೀಳದಂತೆ ತಡೆಯುವ ಬ್ರೇಕ್ ಶಿವಾನುಭವ ಗೋಷ್ಠಿಗಳು, ಆಧ್ಯಾತ್ಮಿಕ ಚಿಂತನೆಗಳು, ಬೆಂದಿರುವ ಬದುಕಿನಲ್ಲಿ ಅಶಾಂತಿ ಬೇಗುದಿಯ ಸಂದರ್ಭದಲ್ಲಿ ವಚನಕಾರರ ಬದುಕು ಮತ್ತು ಬರಹ ತಂಗಾಳಿಯನ್ನು ತರುತ್ತದೆ. ಸಾಕ್ಷರತೆ ಹೆಚ್ಚಿದಂತೆ ರಾಕ್ಷಸತ್ವ ಹೆಚ್ಚುತ್ತಿರುವುದು ಆತಂಕದ ಸಂಗತಿ. ಶಿಕ್ಷಣ ಬದುಕಿಗೆ ಒಂದು ಅಸ್ತ್ರವಾಗದೆ ಅಂತಃಕರಣವಾಗಿ ಮಾರ್ಪಡಬೇಕು. ಮಕ್ಕಳು ಬದುಕಿಗೆ ಭಾರ ಆಗದೆ ಸಾರ ಆಗಲು ಸಂಸ್ಕಾರ ಅಗತ್ಯ ಎಂದರು.
ಸ್ಥಳೀಯ ಸಾಹಿತಿ ಗೌ.ರು. ಓಂಕಾರಯ್ಯ ಬರೆದ ನಮ್ಮೂರು ಗೌರಾಪುರ ಕೃತಿಯನ್ನು ಉಭಯ ಶ್ರೀಗಳು ಬಿಡುಗಡೆ ಮಾಡಿದರು. ಕೃತಿಯನ್ನು ಪರಿಚಯಿಸಿದ ಕೃತಿಕಾರ ಓಂಕಾರಯ್ಯ ಶತಮಾನಗಳ ಊರಿನ ಇತಿಹಾಸ, ಆಚರಣೆ, ನಂಬಿಕೆ, ಪರಂಪರೆ ವೈಶಿಷ್ಟ್ಯಗಳನ್ನು ದಾಖಲಿಸುವ ಸಣ್ಣ ಪ್ರಯತ್ನ ಇದು ಎಂದು ಹೇಳಿದರು.
ನಿವೃತ್ತ ಎಂಜಿನಿಯರ್ ಜಿ.ಎನ್. ಈಶ್ವರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗಶಾಸ್ತ್ರಿ, ಬಡಗನಾಡು ಶ್ರೀ ಹೇಮರೆಡ್ಡಿ ವೀರಶೈವ ಜನಾಂಗ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ವೇದಿಕೆಯಲ್ಲಿದ್ದರು. ಆಕಾಶವಾಣಿ ಕಲಾವಿದ ಶಿವಮೊಗ್ಗದ ನಾಗರತ್ನ ಚಂದ್ರಶೇಖರ್ ತಂಡದ ವಚನ ಗಾಯನ ಗಮನ ಸೆಳೆಯಿತು. ಪ್ರತಿಷ್ಠಾನದ ಅಧ್ಯಕ್ಷ ಜಯಮೂರ್ತಿ ಪ್ರಾಸ್ತಾವಿಕ ನುಡಿಗಳನ್ನೀಡಿದರು. ನಿವೃತ್ತ ಉಪನ್ಯಾಸಕ ಯು.ಎಂ. ಮೂರ್ತಿ ಸ್ವಾಗತಿಸಿ, ಶಿಕ್ಷಕರಾದ ರವಿಕುಮಾರ್ ನಿರೂಪಿಸಿ, ಪ್ರವೀಣ ವಂದಿಸಿದರು.