ಹುಚ್ಚು ನಾಯಿ ಕಡಿತ: 11 ಮಂದಿಗೆ ಗಾಯ
ಶಿರಹಟ್ಟಿ: ತಾಲೂಕಿನ ಹೊಳೆ-ಇಟಗಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ 7.30ರ ಸುಮಾರಿಗೆ ಕೃಷಿ ಕೆಲಸಕ್ಕೆ ತೆರಳುತ್ತಿದ್ದ ಕೃಷಿ ಕೂಲಿ ಕಾರ್ಮಿಕರ ಮೇಲೆ ಹುಚ್ಚು ನಾಯಿಯೊಂದು ದಾಳಿ ಮಾಡಿ 11 ಜನರಿಗೆ ಕಚ್ಚಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಏಕಾಏಕಿ ಊರ ಹೊರವಲಯದ ಅರಣ್ಯ ಪ್ರದೇಶದ ಕಡೆಯಿಂದ ಬಂದ ನಾಲ್ಕು ನಾಯಿಗಳಲ್ಲಿ ಒಂದು ಹುಚ್ಚು ನಾಯಿ ಕಂಡ ಕಂಡವರಿಗೆ ಕಚ್ಚುತ್ತಾ ಓಡುತ್ತಿರುವುದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದು, ತಪ್ಪಿಸಿಕೊಳ್ಳುವಷ್ಟರಲ್ಲಿ ಮೈಮೇಲೆ ಎರಗಿ ಕಚ್ಚುತ್ತಾ ಸಾಗಿ ಗ್ರಾಮ ಪ್ರವೇಶಿಸಿದೆ. ಗ್ರಾಮಸ್ಥರೆಲ್ಲರೂ ಸೇರಿ ಹುಚ್ಚು ಹಿಡಿದ ನಾಯಿ ಹೊಡೆಯಲು ಪ್ರಯತ್ನಿಸಿದರೂ ನಾಯಿ ಸಿಗದೆ ಪರಾರಿಯಾಗಿದೆ.
ಗಾಯಾಳುಗಳನ್ನು ಗದಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.