'ದೈವ ನಂಬಿಕೆಯಿಂದ ಮಾನಸಿಕ ನೆಮ್ಮದಿ'
ಬಾಳೆಹೊನ್ನೂರು: ದೇವರಲ್ಲಿನ ನಂಬಿಕೆಯಿಂದ ಮಾನಸಿಕ ಶಾಂತಿ ಸಾಧ್ಯ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸಮೀಪದ ಮೇಗುಂದಾ ಹೋಬಳಿಯ ಭುವನಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದಸೆ ಶಿವಪಂಚಾಯತನ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಾರುದ್ರ ಹೋಮದ ಪೂರ್ಣಾಹುತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ತಿಮ್ಮಯ್ಯ ಎಂಬುವವರು ನಿರ್ಮಾಣ ಮಾಡಿದ ಶಿವ ಪಂಚಾಯತನ ದೇವಾಲಯ ಪುರಾತನವಾಗಿದ್ದು, ಇಲ್ಲಿ ಉಮಾ ಮಹೇಶ್ವರ, ಗಣಪತಿ, ಸೂರ್ಯನಾರಾಯಣ,
ಗೋಪಾಲಕೃಷ್ಣ ಹಾಗೂ ಆಂಜನೇಯ ದೇವರಿಗೆ ನಿತ್ಯ ಪೂಜೆ ಸಲ್ಲುತ್ತದೆ. ಕಳೆದ ಎರಡು ದಿನಗಳ ಕಾಲ ನವಗ್ರಹ, ಗಣಪತಿ, ಆಂಜನೇಯ, ಗೋಪಾಲಕೃಷ್ಣ ಹಾಗೂ ತೌರ ಹೋಮಗಳನ್ನು ನಡೆಸಲಾಯಿತು.
ಎರಡನೇ ದಿನ ಋತ್ವಿಜರ ನೇತೃತ್ವದಲ್ಲಿ ನಡೆದ ಮಹಾರುದ್ರಹೋಮದಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಪೂರ್ಣಾಹುತಿ ನೀಡಿದರು. ಇದೇ ಸಂದರ್ಭದಲ್ಲಿ ನೂರಾರು ಮಹಿಳೆಯರಿಂದ ಸಹಸ್ರನಾಮಾರ್ಚನೆ ನಡೆಯಿತು.