ಬಯಲುಸೀಮೆಯಲ್ಲಿ ಕುಡಿವ ನೀರಿಗೆ ತತ್ವಾರ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 2
ಜಿಲ್ಲೆಯ ಬಯಲುಸೀಮೆ ಪ್ರದೇಶದಲ್ಲಿ ಎದುರಾಗಿರುವ ಕುಡಿಯುವ ನೀರಿನ ಹಾಹಾಕಾರ ಇರುವ ಗ್ರಾಮಗಳ ಸಂಖ್ಯೆ ಮೇ ತಿಂಗಳಲ್ಲಿ ಇನ್ನಷ್ಟು ಹೆಚ್ಚಳವಾಗಲಿವೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಬಯಲು ಪ್ರದೇಶಗಳ 13 ಗ್ರಾಮ ಪಂಚಾಯ್ತಿಯ 19 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು. ಮೇ ತಿಂಗಳಲ್ಲಿ 36 ಗ್ರಾಮ ಪಂಚಾಯಿತಿಗಳ 48 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಅಂದಾಜು ಮಾಡಿ, ಅಂತಹ ಗ್ರಾಮಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದೆ.
ಮೂರು ತಾಲೂಕುಗಳ ಒಟ್ಟು 48 ಗ್ರಾಮಗಳ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 8, ಕಡೂರು ತಾಲೂಕಿನಲ್ಲಿ 22 ಹಾಗೂ ತರೀಕೆರೆ ತಾಲೂಕಿನಲ್ಲಿ 18 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಈ 48 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸುಮಾರು 11.11 ಲಕ್ಷ ಬೇಕಾಗಿದ್ದು, ಇದಕ್ಕಾಗಿ ಜಿಲ್ಲಾ ಪಂಚಾಯ್ತಿ ಸಿದ್ಧತೆ ಮಾಡಿಕೊಂಡಿದೆ.
ಕೊಳವೆ ಬಾವಿಗಳು: ಕುಡಿಯುವ ನೀರಿನ ಸಮಸ್ಯೆ ಇರುವ ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ(ಎನ್ಆರ್ಡಿಡಬ್ಲ್ಯೂಪಿ)ಯಡಿಯಲ್ಲಿ 2013- 14ನೇ ಸಾಲಿನಲ್ಲಿ ಹೊಸದಾಗಿ 498, ಇತರೆ ಯೋಜನೆಯಡಿಯಲ್ಲಿ ಪ್ರಸಕ್ತ ವರ್ಷದಲ್ಲಿ ಅಂದರೆ 2014ರ ಜನವರಿ 1 ರಿಂದ ಏಪ್ರಿಲ್ 26ರವರೆಗೆ 264 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
ಒಟ್ಟು 762 ಕೊಳವೆ ಬಾವಿಗಳ ಪೈಕಿ 631 ಸಫಲವಾಗಿದ್ದು, 131 ವಿಫಲವಾಗಿವೆ. ಸಫಲವಾಗಿರುವ ಕೆಲವು ಕೊಳವೆ ಬಾವಿಗಳಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಬತ್ತುತ್ತಿದೆ. ಅಂತಹ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಇದರ ಜತೆಗೆ ಖಾಸಗಿ ಕೊಳವೆ ಬಾವಿಗಳನ್ನು ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಡೂರು ತಾಲೂಕಿನ ರಂಗನಾಥಪುರ ಹಾಗೂ ಬಿ.ಕೆ. ಹೊಸೂರು ಗ್ರಾಮಗಳಲ್ಲಿ ಈ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮೂರು ತಾಲೂಕುಗಳ 52 ಗ್ರಾಮಗಳಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗೆ ಪಂಪ್ ಮೋಟಾರ್ ಅಳವಡಿಸಬೇಕಾಗಿದ್ದು, ಇದಕ್ಕೆ 56.87 ಲಕ್ಷ ಅವಶ್ಯಕತೆ ಇದೆ.