ಹೆದ್ದಾರಿ ವಿಸ್ತರಣೆ ಗೊಂದಲ ನಿವಾರಣೆಗೆ ಕೆಬಿಎಂ ಆಗ್ರಹ
ಕಡೂರು: ಭದ್ರಾ ಡ್ಯಾಂನಿಂದ ಕಡೂರು- ಬೀರೂರಿಗೆ ನೀರು ಬರುತ್ತಿರುವ ಸಂದರ್ಭದಲ್ಲೇ ರಾಷ್ಟ್ರೀಯ ಹೆದ್ದಾರಿ ವಿಭಾಗವು ರಸ್ತೆ ವಿಸ್ತರಣೆ ಕುರಿತಂತೆ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ಕೂಡಲೇ ಸಭೆ ಕರೆದು ನಿವಾರಿಸಬೇಕು ಎಂದು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಪಕ್ಷದ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಶೇಖರಪ್ಪ ಅವರಿಗೆ ಮನವಿ ಸಲ್ಲಿಸಿ, ಭದ್ರಾ ಯೋಜನೆಯ ನೀರು ಕಡೂರು ಹಾಗೂ ಬೀರೂರು ಪಟ್ಟಣಕ್ಕೆ ಹರಿಸುವ ಸಂದರ್ಭ ಹತ್ತಿರವಾಗುತ್ತಿದೆ. ಶಿವಮೊಗ್ಗದ ರಾ.ಹೆ. ವಿಭಾಗವು ರಸ್ತೆ ಮಧ್ಯ ಭಾಗದಿಂದ ಸುಮಾರು 16 ಮೀಟರ್ ರಸ್ತೆ ಅಗಲೀಕರಣವಾಗಬೇಕು ಎಂದು ಹೇಳಿದೆ. ಆದರೆ, ಈ ಹಿಂದೆಯೇ ಈ ಎರಡೂ ಪಟ್ಟಣಗಳ ರಸ್ತೆ ವಿಸ್ತರಣೆ ಕುರಿತು ಎಚ್.ಡಿ. ಶಂಕರಮೂರ್ತಿ ಮತ್ತು ಅಂದಿನ ಶಾಸಕರು, ಅಧಿಕಾರಿಗಳು, ಸಾರ್ವಜನಿಕರ ಸಭೆ ಕರೆದು 45 ಅಡಿಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ರಾ.ಹೆ. ಉಪ ವಿಭಾಗ ರಸ್ತೆ ವಿಸ್ತರಣೆಯ ಹೇಳಿಕೆ ನೀಡಿ ಪೈಪುಗಳ ಸ್ಥಳಾಂತರಗೊಳಿಸುವ ಕುರಿತು ಅಂದಾಜು ನಕ್ಷೆ ಕೇಳಿದೆ. ನೀರೊದಗಿಸಲು ಅಡ್ಡಿಯುಂಟಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ತನಿಖೆಗೆ ಮನವಿ: ಕಡೂರು ಪುರಸಭೆಯಲ್ಲಿ ಕಳೆದೆ 15 ದಿನಗಳಲ್ಲಿ ಅನೇಕ ಪ್ರಮುಖ ದಾಖಲೆಗಳು ಮತ್ತು ಕಂಪ್ಯೂಟರ್ ಉಪಕರಣಗಳ ಕಳ್ಳತನವಾಗಿರುವ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಚಂದ್ರಪ್ಪ, ಕೆ.ಎಂ. ವಿನಾಯಕ್, ಕೆ.ಜಿ. ಶ್ರೀನಿವಾಸಮೂರ್ತಿ, ಬಾಸೂರು ಚಂದ್ರಮೌಳಿ ಮತ್ತಿತರರು ಇದ್ದರು.