ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಆರಂಭ

Rashmi Kasaragodu
Updated On : 4 May 2014, 1:54 am

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಪ್ರದೇಶದಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆ ರೈತರಲ್ಲಿ ಹರ್ಷ ಉಂಟು ಮಾಡಿದೆ.
ಬತ್ತಿದ ಕೆರೆಗಳು ಅಲ್ಪಸ್ವಲ್ಪ ನೀರು ಕಂಡಿವೆ. ಮೇವು ಹಾಗೂ ಕುಡಿಯುವ ನೀರಿನ ಕೊರತೆಯಿಂದಾಗಿ ಜಾನುವಾರು ಸಾಕಾಣಿಕೆ ಕಷ್ಟ ಎನಿಸಿದ್ದ ರೈತರಿಗೆ ಮಳೆಯಿಂದಾಗಿ ಕಷ್ಟದ ದಿನಗಳು ದೂರವಾಗಿದೆ.
ಪೂರ್ವ ಮುಂಗಾರು ರೈತರ ಪಾಲಿಗೆ ಆಶಾದಾಯಕವಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಉತ್ತಮ ರೀತಿಯಲ್ಲಿ ಮಳೆ ಬಂದರೆ ಮುಂಗಾರಿನಲ್ಲಿ ಬಿತ್ತನೆ ಮಾಡಲು ಭೂಮಿಯನ್ನು ಹದಗೊಳಿಸಲು ಬೇಸಾಯ ಮಾಡಲಾಗುತ್ತದೆ. ಈ ಬಾರಿ ಉತ್ತಮ ಮಳೆ ಬಂದಿದ್ದರಿಂದ ಪೂರ್ವ ಮುಂಗಾರು ಬಿತ್ತನೆ ಕಾರ್ಯ ಜಿಲ್ಲೆಯ ಬಯಲುಸೀಮೆ ಪ್ರದೇಶದಲ್ಲಿ ಆರಂಭವಾಗಿದೆ.
ಆರಂಭದ ಬೆಳೆಗಳು: ಇತ್ತೀಚೆಗೆ ಬಂದ ಮಳೆಗೆ ಭೂಮಿಯನ್ನು ಹದ ಮಾಡಿರುವ ರೈತರು, ಇನ್ನು ಹದಿನೈದು ದಿನಗಳೊಳಗೆ ಎಳ್ಳು, ಹೆಸರು, ಉದ್ದು ಬಿತ್ತನೆ ಮಾಡಲಿದ್ದಾರೆ. ಇವು ಮುಂಗಾರು ಬೆಳೆಗಳ ಆರಂಭದ ಬೆಳೆಗಳು.
ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಬೆಳವಾಡಿ ಭಾಗಗಳಲ್ಲಿ ಎಳ್ಳು, ಹೆಸರು, ಉದ್ದು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ಎಳ್ಳಿನ ಬಿತ್ತನೆಯ ಗುರಿ 8 ಸಾವಿರ ಹೆಕ್ಟೇರ್ ಆಗಿದ್ದರೆ, ಹೆಸರಿನ ಬಿತ್ತನೆ ಗುರಿ 4345 ಹೆಕ್ಟೇರ್ ಆಗಿದೆ. ಮಳೆ ಹೀಗೆಯೇ ಮುಂದುವರೆದರೆ ಮುಂಗಾರಿನ ಆರಂಭದಲ್ಲಿ ಸೂರ್ಯಕಾಂತಿ, ನೆಲಗಡಲೆ, ಮುಸುಕಿನ ಜೋಳ, ಜೋಳದ ಬಿತ್ತನೆ ಕಾರ್ಯ ನಡೆಯಲಿದೆ.
ಉತ್ತಮ ಮಳೆ: ಈಗ ಬರುತ್ತಿರುವ ಮಳೆಯಿಂದಾಗಿ ರೈತರಿಗೆ ಅದರಲ್ಲೂ ಕೃಷಿ ಬೆಳೆಗೆ ಅನುಕೂಲ ಇಲ್ಲ ಎಂದು ಕೆಲವರು ಹೇಳುವುದು ಸಹಜ. ಆದರೆ, ಭೂಮಿಯನ್ನು ಹದಗೊಳಿಸಲು ಈ ಮಳೆ ಅತ್ಯಂತ ಅವಶ್ಯಕ. ಅದೇ ರೀತಿ ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗಿನ ಬೆಳೆಗಳಿಗೆ ಅನುಕೂಲವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಅಂದರೆ ಜನವರಿ 1 ರಿಂದ ಏಪ್ರಿಲ್ 30 ರವರೆಗೆ ಜಿಲ್ಲೆಯಲ್ಲಿ ಶೇ. 138.4 ರಷ್ಟು ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ 590 ಮಿ.ಮೀ., ಏಪ್ರಿಲ್ ಕೊನೆಯವರೆಗೆ ಬರುವ ಮಳೆ 816.5 ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 104.3 ರಷ್ಟು ಮಳೆಯಾಗಿತ್ತು. ಅಂದರೆ 542.2 ಮಿ.ಮೀ. ಮಳೆ ಬಂದಿತ್ತು.
ತಾಲೂಕುವಾರು ವಾಡಿಕೆ ಮತ್ತು ಬಿದ್ದ ಮಳೆಯ ವಿವರ (ಮಿ.ಮಿ.ಗಳಲ್ಲಿ) ಚಿಕ್ಕಮಗಳೂರು ತಾಲೂಕು- ವಾಡಿಕೆ- 100 ಎಂ.ಎಂ. (ಬಿದ್ದ ಮಳೆ 126.1), ಕಡೂರು- 55 (107.1), ಕೊಪ್ಪ- 91 (89.8), ಮೂಡಿಗೆರೆ- 107 (185.4) ನರಸಿಂಹರಾಜಪುರ- 73 (120.4), ಶೃಂಗೇರಿ- 103 (99.3), ತರೀಕೆರೆ- 61 (88.4) ಮಳೆ ಬಿದ್ದಿದೆ.
ಕಳೆದ ವರ್ಷ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ವಾಡಿಕೆ ಮೀರಿ ಮಳೆ ಬಂದಿತ್ತು. ಆದರೆ, ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳ ಆರಂಭದ 2 ದಿನಗಳಲ್ಲಿ ಉತ್ತಮ ಮಳೆ ಬಂದಿದ್ದು, ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಿದೆ.
ಬರಪೀಡಿತ ಪ್ರದೇಶ: ಬರಪೀಡಿತ ತಾಲೂಕಾಗಿರುವ ಕಡೂರು ತಾಲೂಕಿನಲ್ಲಿ ಸದ್ಯ ಜಾನುವಾರುಗಳ ಮೇವಿನ ಕೊರತೆ ಇಲ್ಲ, ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಈವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಬಂದಿದ್ದರಿಂದ ಈ ತಾಲೂಕಿನ ಜನರು ಸ್ವಲ್ಪಮಟ್ಟಿಗೆ ಚೇತರಿಕೊಳ್ಳುವಂತಾಗಿದೆ. ಇನ್ನು ಮೇವಿನ ಕೊರತೆ ಎದುರಿಸುತ್ತಿರುವ ತರೀಕೆರೆ ತಾಲೂಕಿನ ಕೆಲವು ಭಾಗದಲ್ಲಿ ಜಾನುವಾರುಗಳಿಗೆ ಮೇವು ಬೆಳೆಸಲು ಸದ್ಯ ಪೂರಕ ವಾತಾವರಣ ಇದೆ. ಸದ್ಯ ಬರುತ್ತಿರುವ ಮಳೆ ತಾತ್ಕಾಲಿಕವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement