ತರೀಕೆರೆ ವ್ಯಾಪ್ತಿಯಲ್ಲಿ ಮಳೆ
ತರೀಕೆರೆ: ಶುಕ್ರವಾರ ತಡರಾತ್ರಿ ಪಟ್ಟಣದಲ್ಲಿ ಮಿಂಚು ಗುಡುಗು ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ಮಿಂಚು, ಗುಡುಗು, ಸಿಡಿಲು ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಶುಕ್ರವಾರ ಇಡೀ ದಿನ ಪಟ್ಟಣದಲ್ಲಿ ಬಿಸಿಲಿನ ಧಗೆ ಮತ್ತು ಹೆಚ್ಚು ತಾಪಮಾನದಿಂದ ಕೂಡಿತ್ತು. ಸಾಯಂಕಾಲ ಮೋಡ ಕವಿದಿದ್ದರೂ ಮಳೆಯಾಗಿರಲಿಲ್ಲ. ಆದರೆ ತಡರಾತ್ರಿ ಉತ್ತಮ ಮಳೆಯಾದುದರಿಂದ ಶನಿವಾರ ಬೆಳಗಿನ ವಾತಾವರಣ ತುಸು ತಂಪಾಗಿತ್ತು.
ಬೀರೂರು ವರದಿ: ಶುಕ್ರವಾರ ಗುಡುಗು ಸಿಡಿಲಿನ ಸಹಿತ ಸುರಿದ ಮಳೆಯಿಂದಾಗಿ ಬೀರೂರು ವ್ಯಾಪ್ತಿಯ ಜನತೆ ಸಂತಸಗೊಂಡಿದ್ದಾರೆ. 2 ದಿನಗಳ ಕಾಲ ಬೀರೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಮಳೆಯಾಗಿದೆ. ಆಲಿಕಲ್ಲು ಮಳೆ ಬಂದಿದ್ದರಿಂದ ಮಾವು ಬೆಳೆಗಾರರಲ್ಲಿ ತುಸು ಆತಂಕ ಮನೆ ಮಾಡಿದೆ.
ಮೂಡಿಗೆರೆ ವರದಿ: ತಾಲೂಕಿನ ಕಳಸ, ಕುದುರೆಮುಖ ಸೇರಿದಂತೆ ಹಲವೆಡೆ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕೆಲವೆಡೆ ಕಾಫಿ ಗಿಡಗಳಲ್ಲಿ ಬಿಟ್ಟ ಹೂ ಮಳೆ ಹೊಡೆತಕ್ಕೆ ನೆಲ ಕಚ್ಚಿ ನಷ್ಟಕ್ಕೆ ಕಾರಣವಾಗಿದೆ.