ನಂಜುಂಡಯ್ಯಗೆ ಶ್ರದ್ಧಾಂಜಲಿ ಇಂದು
ಚಿಕ್ಕಮಗಳೂರು: ನಗರದ ಎಂಇಎಸ್ ಶಾಲಾ ಆವರಣದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ನಂಜುಂಡಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿದ್ದ ನಂಜುಂಡಯ್ಯ ಮಾ.12ರಂದು ನಿಧನರಾಗಿದ್ದು, ಅವರಿಗೆ ಗೌರವ ಪೂರ್ಣ ಶ್ರದ್ದಾಂಜಲಿ ಅರ್ಪಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರ ಅಭಿಮಾನಿ ಬಳಗ ಹಾಗೂ ದಲಿತ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭಿಷೇಕ, ವಿಶೇಷ ಪೂಜೆ ಇಂದು
ನರಸಿಂಹರಾಜಪುರ: ಇಲ್ಲಿನ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಶಂಕರ ಜಯಂತಿ ಪ್ರಯುಕ್ತ ಮೇ 4ರ ಭಾನುವಾರ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದೆ ಎಂದು ಉಮಾಮಹೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಎಚ್.ಎಸ್. ಹಿರಿಯಣ್ಣ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಂಕರಾಚಾರ್ಯರ ತತ್ವಗಳ ಬಗ್ಗೆ ವಿ.ಎಸ್. ಕೃಷ್ಣಭಟ್ ಉಪನ್ಯಾಸ ನೀಡುವರು.
ಸಂಧ್ಯಾವಂದನೆ ಕಲಿಕಾ ಶಿಬಿರ
ಶೃಂಗೇರಿ: ಮಕ್ಕಳಲ್ಲಿ ಕಿರಿಯ ವಯಸ್ಸಿನಿಂದಲೇ ಶಿಸ್ತು, ಸಂಯಮ, ಪ್ರಾಮಾಣಿಕತೆ ಬೆಳೆಸಿ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಯಕ್ಷಗಾನ ಕಲಾವಿದ ಜನಾರ್ದನ ಮಂಡಗಾರು ಸಲಹೆ ನೀಡಿದರು.
ಪಟ್ಟಣದ ಶ್ರೀ ವಿದ್ಯಾಭಾರತೀ ಸಭಾಭವನದಲ್ಲಿ ತಾಲೂಕು ಯುವ ವಿಪ್ರ ವೇದಿಕೆ ಹಾಗೂ ತಾಲೂಕು ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ನಡೆಯುತ್ತಿರುವ ಸಂಧ್ಯಾವಂದನೆ ಕಲಿಕಾ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದರು.