ನೋಂದಣಿಗೆ ಚುರುಕು ಮುಟ್ಟಿಸಿದ 'ಪ್ರಾಪರ್ಟಿ ಕಾರ್ಡ್'
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಸಮೀಕ್ಷೆ ಸಂಪೂರ್ಣವಾಗಿ ಎಲ್ಲರಿಗೂ ಪ್ರಾಪರ್ಟಿ ಕಾರ್ಡ್ ವಿತರಿಸುವ ಮುನ್ನವೇ ರಾಜ್ಯ ಸರ್ಕಾರವು ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ಚರಾಸ್ತಿಗೆ ಸಂಬಂಧಿಸಿದ ಯಾವುದೇ ಕರಾರು ಪತ್ರಗಳ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿ ಅಧಿಸೂಚನೆ ಹೊರಡಿಸಿದೆ. ಹಾಗಾಗಿ, ನಾಗರೀಕರು ಈಗ ಗಡಬಡಿಸಿ ಪ್ರಾಪರ್ಟಿ ಕಾರ್ಡ್ ಪಡೆಯಲು ಮುಗಿಬೀಳುತ್ತಿದ್ದಾರೆ.
ಈ ರೀತಿಯ ಪದ್ಧತಿ ಮೇ 1 ರಿಂದ ಜಾರಿಗೆ ಬರುವುದಾಗಿ ಫೆಬ್ರವರಿ ತಿಂಗಳಲ್ಲಿಯೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ನಾಗರೀಕರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಯಾವಾಗ ಪ್ರಾಪರ್ಟಿ ಕಾರ್ಡ್ ಇಲ್ಲದೇ ನೋಂದಣಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರೂ ಅಲ್ಲಿಂದ ಗಡಿಬಿಡಿ ಶುರುವಾಗಿದೆ.
ಸದ್ಯಕ್ಕೆ ಈ ಆದೇಶ ಶಿವಮೊಗ್ಗ ಹಾಗೂ ಮೈಸೂರು ನಗರದಲ್ಲಿ ಮಾತ್ರ ಅನ್ವಯವಾಗಲಿದೆ. ಮಂಗಳೂರು, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಆಸ್ತಿ ಮಾಲೀಕತ್ವ ದಾಖಲೆ ಸಮೀಕ್ಷಾ ಕಾರ್ಯ (ಯುಪಿಎಆರ್) ಸದ್ಯ ಆರಂಭವಾಗಿದೆ. ಮುಗಿದ ಕೂಡಲೇ ಈ ನಗರಗಳಲ್ಲಿಯೂ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಹಾಜರುಪಡಿಸುವುದನ್ನು ಕಡ್ಡಾಯ ಮಾಡುವ ಚಿಂತನೆಯನ್ನು ಕಂದಾಯ ಇಲಾಖೆ ಹೊಂದಿದೆ.
ಏನಿದು ಪ್ರಾಪರ್ಟಿ ಕಾರ್ಡ್?: ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಸರ್ವೆ ಇತ್ಯರ್ಥ ಹಾಗೂ ಭೂ ದಾಖಲೆಗಳ ವಿಭಾಗವು ಇನ್ಫೋಟೆಕ್ ಎಂಬ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಆಸ್ತಿ ಮಾಲೀಕತ್ವದ ದಾಖಲೆ ಸಿದ್ಧಪಡಿಸುವ ಕಾರ್ಯವನ್ನು ಪ್ರಾಯೋಗಿಕವಾಗಿ ರಾಜ್ಯದ 4 ಪಟ್ಟಣಗಳಲ್ಲಿ ಆರಂಭಿಸಿತ್ತು. ಮೂಲ ಗ್ರಾಮ ನಕಾಶೆ ಆಧಾರದ ಮೇಲೆ ಆಸ್ತಿಗಳ ಮಾಲೀಕತ್ವದ ದಾಖಲೆ ಸಮೀಕ್ಷಾ ಕಾರ್ಯ ನಡೆಸಿ, ನಂತರ ಪ್ರತಿಯೊಂದು ಆಸ್ತಿಯ ಮೂಲ, ವಿಸ್ತೀರ್ಣ, ಆಸ್ತಿಗೆ ಸಂಬಂಧಿಸಿದ ಹಿಂದಿನ ವ್ಯವಹಾರಗಳು, ಸಾಲ ಮತ್ತಿತರ ಋಣಭಾರ ಸೇರಿದಂತೆ ಎಲ್ಲ ಮಾಹಿತಿ 'ಪ್ರಾಪರ್ಟಿ ಕಾರ್ಡ್' ವಿತರಿಸುವುದು ಈ ಯೋಜನೆ ಉದ್ದೇಶ. ಆಸ್ತಿ ಮಾಲೀಕರು 250 ನಿಂದ 600 ಪಾವತಿಸಿದರೆ ಈ ಕಾರ್ಡ್ ಲಭ್ಯ.
ಶಿವಮೊಗ್ಗ ನಗರದಲ್ಲಿ 82,000 ಆಸ್ತಿ ಇದ್ದು, ಶೇ.95ರಷ್ಟು ಸಮೀಕ್ಷೆ ಕಾರ್ಯ ಮುಗಿದಿದೆ. 45,000 ಆಸ್ತಿಗೆ ಸಂಬಂಧಿಸಿದ ದಾಖಲೆ ಸಂಗ್ರಹಿಸಲಾಗಿದೆ. 32,000 ಮಾದರಿ ಪ್ರಾಪರ್ಟಿ ಕಾರ್ಡ್ ಸಿದ್ಧವಿದ್ದು, ಈಗಾಗಲೇ 10,000 ಕಾರ್ಡ್ ವಿತರಿಸಲಾಗಿದೆ. ಮೈಸೂರಿನಲ್ಲಿ ಸುಮಾರು 2.5 ಲಕ್ಷ ಆಸ್ತಿ ಇದ್ದು, ಸುಮಾರು 1 ಲಕ್ಷ ಮಾದರಿ ಪ್ರಾಪರ್ಟಿ ಕಾರ್ಡ್ ಸಿದ್ಧವಾಗಿದೆ. 35 ಸಾವಿರ ಕಾರ್ಡ್ ವಿತರಿಸಲಾಗಿದೆ.
ಹಾಗಾಗಿ, ಈ ಎರಡು ಪಟ್ಟಣಗಳಲ್ಲಿ ಆಸ್ತಿ ಸಂಬಂಧಿಸಿದ ಯಾವುದೇ ಕರಾರು ಪತ್ರ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಹಾಜರುಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಪರಿಣಾಮವೇನು?: ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಗಲಿಬಿಲಿ ಕಂಡುಬಂದಿತ್ತು. ಕಾರ್ಡ್ ಇದ್ದವರು ನಿರಾಳವಾಗಿದ್ದರೆ, ಉಳಿದವರು ಯುಪಿಎಆರ್ ಕಚೇರಿ ಎಲ್ಲಿದೆ ಎಂದು ವಿಳಾಸ ಕೇಳುತ್ತಿದ್ದರು. ಆಸ್ತಿ ಮಾರಾಟ ಮಾತ್ರವಲ್ಲದೇ ಆಸ್ತಿಗೆ ಸಂಬಂಧಿಸಿದ ಯಾವುದೇ ಕರಾರು ಪತ್ರ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಆಗಿರುವುದರಿಂದ ಬ್ಯಾಂಕ್ ಸಾಲ ಪಡೆಯುವವರೂ ಸಹ ಪ್ರಾಪರ್ಟಿ ಕಾರ್ಡ್ ಹೊಂದಿರಬೇಕೇ ಎಂಬ ಪ್ರಶ್ನೆ ಮೇಲೆದ್ದಿತ್ತು.
ಈ ಬಗ್ಗೆ ಹಿರಿಯ ಉಪನೋಂದಣಾಧಿಕಾರಿ ಅಂಬಿಕಾ ಪಟೇಲ್ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಸ್ಪಷ್ಟನೆ ಪಡೆಯುತ್ತೇನೆ ಎಂದು 'ಕನ್ನಡಪ್ರಭ'ಕ್ಕೆ ಹೇಳಿದರು.
ಯುಪಿಎಆರ್ ಪ್ರಾಜೆಕ್ಟ್ ಲೀಡರ್ ಪೆರುಮಾಳ್ ಅವರನ್ನು ಸಂಪರ್ಕಿಸಿದಾಗ, ಸಮೀಕ್ಷೆ ಪೂರ್ಣವಾಗಿ, ದಾಖಲೆ ಸಲ್ಲಿಕೆ ಆಗಿರುವ ಪ್ರಕರಣಗಳಲ್ಲಿ ನಾಲ್ಕೈದು ದಿನದೊಳಗೇ ಪ್ರಾಪರ್ಟಿ ಕಾರ್ಡ್ ವಿತರಿಸುತ್ತೇವೆ. ಕಾನೂನಾತ್ಮಕ ಸಮಸ್ಯೆಗಳಲ್ಲಿ ಸಾಧ್ಯವಿಲ್ಲ ಎಂದರು.
ಸದ್ಯ ಈ ಹೊಸ ಪದ್ಧತಿಗೆ ಶಿವಮೊಗ್ಗ ಹಾಗೂ ಮೈಸೂರಿನ ನಾಗರಿಕರು ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾರೆ.