ಗಾಳಿ, ಮಳೆಗೆ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ತರೀಕೆರೆ: ತಾಲೂಕಿನ ರೈತರು ಬೆವರು ಸುರಿಸಿ ಬೆಳೆಸಿದ ಅಡಿಕೆ, ತೆಂಗು ಮತ್ತು ಬಾಳೆ ಮರಗಳು, ಭಾರೀ ಗಾಳಿ ಮಳೆಯಿಂದಾಗಿ ಕೇವಲ ಕೆಲವೇ ನಿಮಿಷಗಳಲ್ಲಿ ಕಣ್ಣೆದುರಿಗೆ ಬುಡ ಸಹಿತ ನೆಲಕ್ಕುರುಳಿ ನಾಶವಾಗಿವೆ.
ತರೀಕೆರೆ ತಾಲೂಕಿನಲ್ಲಿ ಸದ್ಯ ಆಗಿರುವುದೇ ಹೀಗೆ, ಈ ವರ್ಷದ ಏಪ್ರಿಲ್ ಮಧ್ಯ ಭಾಗದಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಬೀಸಿದ ಭಾರಿ ಪ್ರಮಾಣದ ಗಾಳಿ ಮಳೆ ಮತ್ತು ಗುಡುಗು ಸಿಡಿಲಿನ ಆರ್ಭಟಕ್ಕೆ ಸಿಲುಕಿದ ಪರಿಣಾಮ ಫಲ ಭರಿತ ಅಡಿಕೆ, ತೆಂಗು ಮತ್ತು ಗೊನೆ ಬಿಟ್ಟ ಬಾಳೆ ಮರಗಳು ರಾತ್ರೋ ರಾತ್ರಿ ನೆಲ ಕಚ್ಚಿ ಲಕ್ಷಾಂತರ ರು. ನಷ್ಟವಾಗಿ ರೈತರು ಕಣ್ಣೀರುಡುವಂತಾಗಿದೆ.
ತೋಟದ ಬೆಳೆ ನಾಶ: ಶಿವನಿ ಹೋಬಳಿ, ಶಿವನಿ, ಬುಕ್ಕಾಂಬುದಿ ಡಣಾಯಕಪುರ ಚೀರನಹಳ್ಳಿ, ದಂದೂರು, ತ್ಯಾಗದಕಟ್ಟೆ, ಶಾನುಭೋಗನಹಳ್ಳಿ, ಬೇಗೂರು, ಅಜ್ಜಂಪುರ, ತರೀಕೆರೆ ಕಸಬಾ ಈ ಪ್ರದೇಶಗಳಲ್ಲಿ ಗಾಳಿ, ಮಳೆಯ ಆರ್ಭಟದಿಂದ ನೂರಾರು ಅಡಿಕೆ, ತೆಂಗು, ಬಾಳೆ ಮರಗಳು ನಾಶವಾಗಿದೆ. ಬರಮನಹಳ್ಳಿಯಲ್ಲಂತೂ ಕಟಾವಿಗೆ ಸಿದ್ದವಾಗುತ್ತಿದ್ದ ಬಾಳೆ ಮರಗಳು ಗಾಳಿಯಿಂದಾಗಿ ನೆಲಕಚ್ಚಿವೆ. ಇದೇ ಗ್ರಾಮದಲ್ಲಿ ಅನೇಕ ಮನೆಗಳು ಗಾಳಿಯಿಂದಾಗಿ ಸೂರುಗಳು ಹಾರಿಹೋಗಿದೆ. ಕಸಬಾ ಹೋಬಳಿಯ ದೋರನಾಳು ತೋಟಗಳಲ್ಲಿ ಅಡಿಕೆ ಮರಗಳು, ಲಕ್ಕವಳ್ಳಿ ಹೋಬಳಿಯ ವಡ್ಡರದಿಬ್ಬ, ಬಸವನಹಳ್ಳಿ, ಹೊಸಮನೆ ಗೇಟ್ ಈ ಗ್ರಾಮಗಳಲ್ಲಿ ಹತ್ತಾರು ಎಕರೆ ತೋಟದಲ್ಲಿ ರೈತರು ಬೆಳೆಸಿದ ಅಡಿಕೆ ತೆಂಗು ಮತ್ತು ಬಾಳೆ ಮರಗಳು ನೆಲಕಚ್ಚಿವೆ, ಭಾರೀ ಗಾಳಿಯಿಂದಾಗಿ ಅನೇಕ ಮನೆಗಳ, ಶಾಲೆ, ಸಮುದಾಯ ಭವನಗಳ ಸೂರು ಹಾರಿ ಹೋಗಿದೆ.
ಗಾಳಿ ಕಾರಣ: ಮಳೆಗಿಂತ ಗುಡುಗು ಸಿಡಿಲು ಮತ್ತು ಗಾಳಿಯ ಆರ್ಭಟವೇ ಹೆಚ್ಚಾಗಿದ್ದು ಭಾರೀ ಗಾಳಿಯಿಂದಾಗಿಯೇ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ರೈತರು ತಿಳಿಸಿದ್ದಾರೆ. ವಿಪರೀತ ಗಾಳಿಯಿಂದ ಬಸವನಹಳ್ಳಿ, ಹೊಸಮನೆ ಗೇಟ್ ಸುತ್ತಮುತ್ತ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ, ಸಿಡಿಲಿನ ಹೊಡೆತದಿಂದ ಟಿ.ಸಿ.ಗಳು ಸುಟ್ಟು ಹೋಗಿವೆ. ದೋರನಾಳು ಗ್ರಾಮ ಸುತ್ತಮುತ್ತ ಮಾವಿನ ಮರಗಳು ಫಲ ಸಹಿತ ನೆಲಕಚ್ಚಿವೆ. ವಾತಾವರಣದ ಏರುಪೇರಿನಿಂದ ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಫಲ ನೀಡುತ್ತಿದ್ದ ಅಡಿಕೆ ತೆಂಗು, ಬಾಳೆ ಮರಗಳು ಧರೆಗೆ ಉರುಳಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎನ್ನುವುದು ರೈತರ ಆಗ್ರಹ.