ಅತಿವೃಷ್ಟಿ, ಅನಾವೃಷ್ಟಿ ಅಂದಾಜುಪಟ್ಟಿ ತಯಾರಿಸಿ
ಚಿಕ್ಕಮಗಳೂರು: ಜಿಲ್ಲೆಯ ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು, ಈ ಭಾಗದಲ್ಲಿ ಕುಡಿಯುವ ನೀರು ಸರಬರಾಜಿಗೆ ಕೂಡಲೇ ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಇದ್ದು, ಈ ಭಾಗದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಒತ್ತು ನೀಡಬೇಕು. ಅವಶ್ಯವಿದ್ದಲ್ಲಿ ಟ್ಯಾಂಕರ್ಗಳ ಮುಖಾಂತರ ನೀರು ಒದಗಿಸಬೇಕೆಂದು ಹೇಳಿದರು.
ಆಕ್ಷೇಪ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜಿನ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಅಂತಹ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ವಿದ್ಯುತ್ ಪೂರೈಕೆ ಮಾಡಲು ಜಾಗೃತಿ ವಹಿಸಬೇಕು. ಈ ಕುರಿತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಆಗಾಗ ಸವಿಸ್ತಾರವಾದ ವರದಿ ನೀಡಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮರ್ಪಕವಾಗಿ ವಿತರಿಸಿ: ಜಿಲ್ಲೆಯ ಮಳೆ, ಬೆಳೆ, ಬಿತ್ತನೆ ಬೀಜಗಳ ಲಭ್ಯತೆ, ರಸಗೊಬ್ಬರ ಹಾಗೂ ಔಷಧಿ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದ ರಾಜೀವ್ ಚಾವ್ಲಾ, ಮುಂಬರುವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಯಾವುದೇ ಗೊಂದಲವಾಗದಂತೆ ಸಮರ್ಪಕವಾಗಿ ರೈತರಿಗೆ ಸರಬರಾಜು ಮಾಡಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ಒಂದು ತಿಂಗಳಿನಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾದ ನಷ್ಟದ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಹೇಳಿದರು.
ಜಿಲ್ಲಾದ್ಯಂತ ಈಗಾಗಲೇ ಒಂದು ಸಾವಿರ ರೈತರಿಗೆ ಮೇವಿನ ಬೀಜಗಳನ್ನು ಸರಬರಾಜು ಮಾಡಲಾಗಿದ್ದು, ಆ ರೈತರು ಮೇವಿನ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದು, ಪಟ್ಟಿ ನೀಡಬೇಕೆಂದು ಸೂಚನೆ ನೀಡಿದರು.
ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುತ್ತಿರುವ ಬಗ್ಗೆ ನಗರಸಭೆ ಆಯುಕ್ತರು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಚಿಕ್ಕಮಗಳೂರು ನಗರದಲ್ಲಿ ನೀರಿನ ಸಮಸ್ಯೆ ಇಲ್ಲವೆಂದು ಹೇಳಲಾಗುತ್ತಿದೆ. ಆದರೆ, ನಿಗದಿತ ಪ್ರಮಾಣದ ನೀರು ಸರಬರಾಜು ಆಗುತ್ತಿಲ್ಲ, ಈ ಬಗ್ಗೆ ಎಚ್ಚರ ವಹಿಸಬೇಕೆಂದು ನಗರಸಭಾ ಆಯುಕ್ತರಿಗೆ ತಿಳಿಸಿದರು.
ನಾಳೆ ಭೇಟಿ: ಮಳೆಯ ಕೊರತೆಯಿಂದಾಗಿ ಬರಪೀಡಿತ ತಾಲೂಕ್ಕೆಂದು ಘೋಷಿಸಲಾಗಿರುವ ಕಡೂರು ತಾಲೂಕಿನಲ್ಲಿ ಬರದಡಿಯಲ್ಲಿ ತೆಗೆದುಕೊಂಡಿರುವ ಕಾಮಗಾರಿಯನ್ನು ತಾವು ಖುದ್ದಾಗಿ ಮಂಗಳವಾರ ಪರಿಶೀಲಿಸುವುದಾಗಿ ರಾಜೀವ್ ಚಾವ್ಲಾ ಹೇಳಿದರು.
ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ತೆಗೆದುಕೊಳ್ಳಲಾಗಿರುವ ಕಾಮಗಾರಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಜಿಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪಿ.ಬಿ. ಕರುಣಾಕರ್, ಉಪ ವಿಭಾಗಾಧಿಕಾರಿಗಳಾದ ಕೆ. ಚನ್ನಬಸಪ್ಪ, ಅನುರಾಧ, ಎಲ್ಲಾ ತಾಲೂಕಿನ ತಹಸೀಲ್ದಾರ್ಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ
ಜಿಲ್ಲೆಯಲ್ಲಿ ಮುಂಗಾರು ಬೆಳೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು ಅವರು ತಿಳಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 14 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಹಾಗೂ 140 ಕ್ವಿಂಟಲ್ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು 'ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಯೂರಿಯಾ, ಕಾಂಪ್ಲೆಕ್ಸ್, ಡಿಎಪಿ ಸೇರಿದಂತೆ ಇತರೆ ಗೊಬ್ಬರ ಫೆಡರೇಷನ್ನಲ್ಲಿ 8 ಸಾವಿರ ಹಾಗೂ ಖಾಸಗಿ ಮಾರಾಟಗಾರರಲ್ಲಿ 6 ಸಾವಿರ, ಒಟ್ಟು 14 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಯಲ್ಲಿದೆ. ಉದ್ದು, ಅಲಸಂದೆ, ಹೆಸರು, ಎಳ್ಳು ಸೇರಿದಂತೆ ಇತರೆ ಬಿತ್ತನೆ ಬೀಜಗಳು ಒಟ್ಟು 140 ಕ್ವಿಂಟಲ್ ಇದೆ. ಈವರೆಗೆ 340 ಕ್ವಿಂಟಲ್ ಶೇಂಗಾ ಬಿತ್ತನೆ ಬೀಜವನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಗೆ ಮುಂಗಾರಿನಲ್ಲಿ ಒಟ್ಟು 15 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಬೇಕಾಗಿದ್ದು, ಬೇಡಿಕೆಯ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಹಂತ- ಹಂತವಾಗಿ ಬಿತ್ತನೆ ಬೀಜ ಸರಬರಾಜು ಆಗುತ್ತಿದೆ. ರೈತರಿಗೆ ಶೇ. 50ರ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಬಿತ್ತನೆ ಕಾರ್ಯಕ್ಕಾಗಿ ರೈತರು ಭೂಮಿಯನ್ನು ಹದಗೊಳಿಸುತ್ತಿದ್ದಾರೆ. ಕಡೂರು ತಾಲೂಕಿನಲ್ಲಿ ಹೆಸರು, ಉದ್ದು, ಅಲಸಂದೆ ಹಾಗೂ ಎಳ್ಳು ಬಿತ್ತನೆ ಕಾರ್ಯ ಆರಂಭಗೊಂಡಿದೆ ಎಂದು ಹೇಳಿದ್ದಾರೆ.