ಕಾರು ಅಪಘಾತ: ಮಹಿಳೆ ಸಾವು
ಮೂಡಿಗೆರೆ: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಹಿಳೆಯ ಪತಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಟ್ಟದೂರು ಗ್ರಾಮದ ಜ್ಯೋತಿ (20) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಈಕೆಯ ಸಂಬಂಧಕರು ಕಲ್ಲುಕೋರೆ ಸಮೀಪ ಕೂಲಿ ಕೆಲಸ ಮಾಡುವ ಸ್ಥಳಕ್ಕೆ ಊಟ ತೆಗೆದುಕೊಂಡು ತೆರಳುವ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ತಕ್ಷಣ ಚಿಕಿತ್ಸೆಗೆಂದು ಮೂಡಿಗೆರೆ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಜ್ಯೋತಿ ಮೃತಪಟ್ಟಿದ್ದಾರೆ. ಮೃತಳಿಗೆ ಕಳೆದ ನಾಲ್ಕು ವರ್ಷದ ಹಿಂದೆ ವಿವಾಹವಾಗಿದೆ. ಮೂರು ವರ್ಷದ ಗಂಡು ಮಗುವಿದೆ. ಜ್ಯೋತಿ ಮತ್ತು ಆಕೆಯ ಪತಿ ಬಿಳ್ಳೂರು ಗ್ರಾಮದ ಕಲ್ಲುಕೋರೆಯ ಸಮೀಪ ಕೂಲಿ ವೃತ್ತಿ ಮಾಡುತ್ತಿದ್ದರು. ಕೆಲಸದ ನಿಮಿತ್ತ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಜ್ಯೋತಿಯ ಪತಿ ನಾಗರಾಜು ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡ ವೃತ್ತ ನಿರೀಕ್ಷಕ ಹಿರೇಮಠ್ ಅವರ ನಿರ್ದೇಶನದಂತೆ ಗೋಣಿಬೀಡು ಠಾಣಾಧಿಕಾರಿ ಪ್ರಶಾಂತ್ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.