ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೂಲ ಸೌಲಭ್ಯಕ್ಕೆ ಗ್ರಾಮಸ್ಥರ ಆಗ್ರಹ

Rashmi Kasaragodu
Updated On : 6 May 2014, 11:16 am

ಚಿಕ್ಕಮಗಳೂರು: ರಸ್ತೆ, ವಿದ್ಯುತ್‌ದೀಪ ಅಳವಡಿಸುವುದು ಸೇರಿದಂತೆ ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ನಗರದ ಕೆಂಪನಹಳ್ಳಿ, ಉಂಡೇದಾಸರಹಳ್ಳಿ ನಿವಾಸಿಗರು ನಗರಸಭಾಧ್ಯಕ್ಷ ಪುಷ್ಪರಾಜ್ ಅವರಿಗೆ ಸೋಮವಾರ ಪ್ರತ್ಯೇಕ ಮನವಿ ಸಲ್ಲಿಸಿದರು.
ನಗರದ 35ನೇ ವಾರ್ಡ್‌ನಲ್ಲಿರುವ ನಗರಸಭೆ ಜಲ ಶುದ್ಧೀಕರಣ ಹಿಂಭಾಗದಲ್ಲಿದ ಮನೆಗಳ ಆಸುಪಾಸಿನಲ್ಲಿ ತುಂಬಾ ಹಳೆಯದಾದ ಮರಗಳಿದ್ದು, ಗಾಳಿ, ಮಳೆ ಬಂದಾಗ ಅವು ಬಿದ್ದು ಆಸ್ತಿ, ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಮರಗಳ ಕೊಂಬೆಗಳನ್ನು ಕಟಾವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೀದಿ ದೀಪವಿಲ್ಲ: ಜಲಶುದ್ಧೀಕರಣ ಹಿಂಭಾಗದಿಂದ ಬರುವ ರಸ್ತೆಯನ್ನು ಬಹಳ ಜನ ಓಡಾಡಲು ಉಪಯೋಗಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಇಲ್ಲಿರುವ ಹಳೆ ವಿದ್ಯುತ್ ಕಂಬಗಳನ್ನು ತೆಗೆಸಿ, ಹೊಸ ವಿದ್ಯುತ್ ಕಂಬ ಹಾಕಿಸಿ, ವಿದ್ಯುತ್ ದೀಪ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲಿನ ರಸ್ತೆ ತುಂಬಾ ಹಾಳಾಗಿದ್ದು, ಕೆಂಪನಹಳ್ಳಿಯಿಂದ ಟೌನ್ ಕ್ಯಾಂಟಿನ್ ವೃತ್ತದ ಕಡೆಗೆ ಹೋಗುವವರಿಗೆ ಬಹಳ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಈ ರಸ್ತೆಗೆ ಜಲ್ಲಿ ಹಾಕಿಸಿ ಚರಂಡಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಸ್ತೆ ಕುಸಿತ: ನಗರದ 9ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪಾಯಿಸ್ ಕಾಂಪೌಂಡ್ ರಸ್ತೆಯ ಡಾಂಬರೀಕರಣ ನಡೆಯುತ್ತಿದ್ದು, ಈ ರಸ್ತೆಯ ಎರಡು ಬದಿಯಲ್ಲಿ ರಸ್ತೆ ಕುಸಿದಿದೆ. ಈ ರಸ್ತೆಯಲ್ಲಿ ಸ್ಕೂಲ್ ಬಸ್, ಟ್ರ್ಯಾಕ್ಟರ್, ಆಪೇ ಗಾಡಿ ಸೇರಿದಂತೆ ಇತರೆ ವಾಹನಗಳು ಓಡಾಡುತ್ತಿದ್ದು, ರಸ್ತೆ ಕುಸಿತದಿಂದಾಗಿ ವಾಹನ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ. ಈ ರಸ್ತೆ ಡಾಂಬರೀಕರಣ 16 ಅಡಿಗೆ ಮಂಜೂರಾಗಿದೆ. ಆದರೆ, ಸದ್ಯ ಈ ರಸ್ತೆ ಕೇವಲ 8 ಅಡಿ ಮಾತ್ರ ಇದ್ದು, ಮಂಜೂರಾತಿ ದೊರೆತಿರುತ್ತುರುವ ಅಡಿಗಳಷ್ಟು ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಉಡೇದಾಸರಹಳ್ಳಿಯಲ್ಲಿ ರಾಜ ಕಾಲುವೆ ಇದ್ದು, ರಾಮೇಶ್ವರ ಡ್ಯಾಂನಿಂದ ಈ ಕಾಲುವೆಗೆ ನೀರು ಹರಿದು ಬರುತ್ತಿದೆ. ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗಿ ತೊಂದರೆಯಾಗುತ್ತಿದೆ. ಈ ಕಾಲುವೆಯ ಆಸುಪಾಸಿನಲ್ಲಿರುವವರು ಕಾಲುವೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ 9ನೇ ವಾರ್ಡಿನ ಹೊನ್ನೇಶ, ವರದರಾಜ್, ವಿನಾಯಕ್, ಶ್ರೀಕಾಂತ್, ಸಂಜು, 35ನೇ ವಾರ್ಡ್‌ನ ಕುಮಾರ್, ಕೆ.ಎನ್. ಶಶಿಧರ್, ಸುರೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement