ಶಂಕರರು ಜ್ಞಾನ ಮಾರ್ಗದ ಪ್ರತಿಪಾದಕ: ನಾಗರಾಜ ಶರ್ಮ
ಕ.ಪ್ರ.ವಾರ್ತೆ, ತರೀಕೆರೆ, ಮೇ 5
ಶಂಕರರು ಜ್ಞಾನಮಾರ್ಗದ ಪ್ರತಿಪಾದಕರು ಎಂದು ಬೆಂಗಳೂರು ಸತ್ಸಂಗ ಸಂಚಾಲಕ ವೇ.ಬ್ರ.ಶ್ರೀ. ನಾಗರಾಜ ಶರ್ಮ ಅಭಿಪ್ರಾಯಪಟ್ಟರು.
ಅವರು, ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಶಂಕರ ಜಯಂತಿ ವಿಶೇಷ ಉಪನ್ಯಾಸ ಮತ್ತು ಸೌಂದರ್ಯ ಲಹರಿ ಪಾರಾಯಣ ಮುಕ್ತಾಯ ಸಮಾರಂಭದಲ್ಲಿ ಶಂಕರ ಸ್ತೋತ್ರ ವೃತ್ತಾಂತ ರೂಪಕ ಪ್ರಸ್ತುತಪಡಿಸಿ ಮಾತನಾಡಿದರು.
ಧರ್ಮ ಉದ್ಧೀಪನ: ಶಂಕರರು ಸನ್ಯಾಸ ಸ್ವೀಕರಿಸಿ ಸನಾತನ ಧರ್ಮವನ್ನು ಉದ್ದೀಪನಗೊಳಿಸಿದರು. ಮೋಕ್ಷ ಮಾರ್ಗಕ್ಕೆ ಭಾಷ್ಯ ಬರೆದರು. ಪರಮಾತ್ಮನ ಪೂಜೆಯನ್ನು ಮಾನಸಿಕವಾಗಿಯೂ ಮಾಡಬಹುದು ಎಂದರು. ಮಾತೃ ಭಕ್ತಿ ಪ್ರದರ್ಶಿಸಿದ ಶಂಕರರು ಭಾರತಾದ್ಯಂತ ಕಾಲ್ನಡಿಗೆಯಲ್ಲಿ ಎಲ್ಲ ಕಡೆ ಸಂಚರಿಸಿದ್ದು, ವಿಸ್ಮಯವೇ ಸರಿ ಎಂದು ತಿಳಿಸಿದರು.
ಧರ್ಮ ಸಂಸ್ಥಾಪನೆಗಾಗಿಯೇ ಮಹಾನ್ ಪುರುಷರ ಅವತಾರವಾಗುತ್ತದೆ. ಶಂಕರರು ಸಂಚಾರವನ್ನು ಶ್ರೀರಾಮನಂತೆ ನಡೆದು ತೋರಿಸಿ ಆತನ ಪಾದ ವಿಸ್ತಾರ ಮಾಡಿದರು ಎಂದು ತಿಳಿಸಿದ ಅವರು ಮಹಾತ್ಮರ ಜನ್ಮದಿನೋತ್ಸವವನ್ನು ವೈಭವದಿಂದಲೇ ಆಚರಿಸಬೇಕು ಎಂದು ತಿಳಿಸಿದರು.
ರೂಪಕದಲ್ಲಿ ಗಣಪತಿ ಸ್ತೋತ್ರ, ಗುರುಸ್ತೋತ್ರ, ಕನಕಧಾರಾ ಸ್ತೋತ್ರಗಳನ್ನು ಪಠಿಸಿ ವ್ಯಾಖ್ಯಾನ ಮಾಡಲಾಯಿತು. ಸೂರ್ಯನಾರಾಯಣ ಶರ್ಮ ಮಾತನಾಡಿ, ಶಂಕರ ಜಯಂತಿ ಪುನರ್ಮನನವಾಗಿದೆ. ಭಾವ ಮತ್ತು ಬುದ್ಧಿ ಪ್ರಧಾನವಾಗಿಯೂ ಸಪ್ತಾಹ ಕಾರ್ಯಕ್ರಮ ಅರ್ಥವತ್ತಾಗಿ ನಡೆದಿದೆ ಎಂದು ತಿಳಿಸಿದರು.
ಮೃದಂಗ ವಿದ್ಯಾನ್ ರಾಜಾಚಾರ್ ಸಮಾರೋಪ ಭಾಷಣ ಮಾಡಿದರು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್, ಶಂಕರ ಸಪ್ತಾಹದ ತಾಲೂಕು ಸಂಚಾಲಕ ಬಿ.ಎಚ್. ಕುಮಾರಸ್ವಾಮಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರೂಪಕದಲ್ಲಿ ರಕ್ಷಿತ್, ವಸಂತ ಕೇಶವನ್, ವಿಜಯ ಉಡುಪ, ವಸಂತ ಸುಬ್ಬರಾವ್ ಭಾಗವಹಿಸಿದ್ದರು. ಶ್ರೀವತ್ಸ ಭಜನಾ ಮಂಡಳಿ ಸದಸ್ಯೆಯರಿಂದ ಶಂಕರ ಭಜನೆ, ಜಿ. ನಾರಾಯಣ ಸ್ವಾಮಿ ಅವರಿಂದ ಶಂಕರ ವಿಜಯ ಪಾರಾಯಣ ಏರ್ಪಡಿಸಲಾಗಿತ್ತು.