ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಂಕರಾಚಾರ್ಯರ ಮಹಾರಥೋತ್ಸವ

Rashmi Kasaragodu
Updated On : 6 May 2014, 11:17 am

ಶೃಂಗೇರಿ: ದಕ್ಷಿಣಾಮ್ನಾಯ ಶಾರದಾ ಪೀಠದ ಸಂಸ್ಥಾಪಕ ಜಗದ್ಗುರು ಶಂಕರ ಭಗವತ್ಪಾದಾಚಾರ್ಯರ ಮಹಾರಥೋತ್ಸವ ಸೋಮವಾರ ವೈಭವಯುತವಾಗಿ ನಡೆಯಿತು.
ಜಗದ್ಗುರು ಭಾರತೀ ತೀರ್ಥರ ಸಾನ್ನಿಧ್ಯದಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕಳೆದ ಕೆಲ ದಿನದಿಂದ ಮಳೆ ಸುರಿಯುತ್ತಿದ್ದು, ಕಾರ್ಯಕ್ರಮಗಳಿಗೆ ಅಡ್ಡಿ ಉಂಟಾಗಿತ್ತು. ಆದರೆ ಸೋಮವಾರ ಮಳೆ ಇಳಿಮುಖವಾಗಿದ್ದರಿಂದ ಕಾರ್ಯಗಳಿಗೆ ಯಾವುದೇ ರೀತಿಯ ಅಡ್ಡಿಯಾಗಲಿಲ್ಲ.
ರಥ ಸಾಗುವ ಮುನ್ನ ಮುಖ್ಯ ರಸ್ತೆಯನ್ನು ಶುಭ್ರಗೊಳಿಸಿ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ಆರಂಭವಾದ ಮಹಾರಥೋತ್ಸವದಲ್ಲಿ ಛತ್ರ, ಚಾಮರ, ವಾದ್ಯವೃಂದ, ನೂರಾರು ವಿಪ್ರೋತ್ತಮರ ವೇದಘೋಷ, ಮಠದ ಆನೆ ಲಕ್ಷ್ಮಿ, ಜಯಲಕ್ಷ್ಮಿಯರು, ಮಠದ ಗೋವುಗಳು ರಾಜಬೀದಿಯಲ್ಲಿ ನಡೆದ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ಶತರುದ್ರಾಭಿಷೇಕ: ಶಂಕರ ಜಯಂತಿ ಪ್ರಯುಕ್ತ ಮಠದಲ್ಲಿ ಏ. 30 ರಿಂದ ಅರಂಭಗೊಂಡಿದ್ದ ವಿಶೇಷ ಕಾರ್ಯಕ್ರಮ ಮೇ 5 ರವರೆಗೆ ನಡೆಯಿತು. ಶಂಕರ ಭಗವತ್ಪಾದಾಚಾರ್ಯರ ಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಚತುರ್ವೇದ- ಪ್ರಸ್ಥಾನತ್ರಯ ಭಾಷ್ಯ, ಶಂಕರ ವಿಜಯ ಮೊದಲಾದ ವಿಶೇಷ ಪೂಜೆಗಳು ನೆರವೇರಿತು.
ಭಗವತ್ಪಾದಾಚಾರ್ಯರ ಮೂರ್ತಿಗೆ ಮಹಾಮಂಗಳಾರತಿ, ಅಷ್ಠಾವಧಾನ ಸೇವೆ, ವೇದಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ, ವಿದ್ವತ್ಸಮ್ಮಾನ ಕಾರ್ಯಕ್ರಮ ಜರುಗಿತು. ಸೋಮವಾರದ ಮಹಾರಥೋತ್ಸವದೊಂದಿಗೆ ಶಂಕರ ಜಯಂತಿ ಕಾರ್ಯಕ್ರಮ ತೆರೆಕಂಡಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement