ಅಕ್ರಮ ಮದ್ಯ ತಡೆಗೆ ಕ್ರಮ ಜರುಗಿಸಿ: ಕೃಷ್ಣಪ್ಪ
ನರಸಿಂಹರಾಜಪುರ: ತರಕಾರಿ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳಲ್ಲೂ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು ಸರ್ಕಾರವು ಇದಕ್ಕೆ ಕಟ್ಟುನಿಟ್ಟಾಗಿ ನಿರ್ಬಂಧ ಹೇರಬೇಕು ಎಂದು ಮಡಬೂರಿನ ಸಾವಯುವ ಕೃಷಿ ಪರಿವಾರದ ಅಧ್ಯಕ್ಷ ಕೆ.ಡಿ. ಕೃಷ್ಣಪ್ಪ ಆಗ್ರಹಿಸಿದರು.
ಮಂಗಳವಾರ ಕಳ್ಳಿಕೊಪ್ಪದ ಜಿ.ಟಿ. ನಾರಾಯಣಗೌಡ ಸಮುದಾಯ ಭವನದಲ್ಲಿ ನಡೆದ 678ನೇ ಮದ್ಯವರ್ಜನ ಶಿಬಿರದಲ್ಲಿ ಮಾಹಿತಿ ಮಾರ್ಗದರ್ಶನ ಸಭೆಯಲ್ಲಿ ಮಾತನಾಡಿದರು.
ಮದ್ಯ ವ್ಯಸನದಿಂದಾಗಿ ಬಡವರು ಕಷ್ಟಪಟ್ಟು ದುಡಿದ ಹಣವೆಲ್ಲಾ ವ್ಯರ್ಥವಾಗುತ್ತಿದೆ. ಮದ್ಯ ವ್ಯಸನಗಳಿಂದ ಕುಟುಂಬದವರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಮದ್ಯಪಾನದಿಂದ ಕೊಲೆ, ಸುಲಿಗೆ, ಆತ್ಮಹತ್ಯೆಯಂತಹ ಪ್ರಕರಣಗಳು ನಡೆಯುತ್ತಿದೆ ಎಂದರು.
ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆ ಶಿಕ್ಷಕ ಗುಣಪಾಲ್ ಜೈನ್ ಮಾತನಾಡಿ, ಸಮಾಜದಲ್ಲಿ ಗೌರವ ಸಿಗಬೇಕಾದರೆ ಮದ್ಯವ್ಯಸನಿಗಳು ತಮ್ಮ ಕುಡಿತದ ಚಟವನ್ನು ಬಿಡಬೇಕು. ಕುಡಿತವು ಜೀವನ ಕೊಟ್ಟಿಲ್ಲ, ಹಣ ಕೊಟ್ಟಿಲ್ಲ. ಆರೋಗ್ಯ ಕೊಟ್ಟಿಲ್ಲ. ಕುಡಿತ ದಿಂದ ಏನೂ ಪ್ರತಿಫಲ ಇಲ್ಲದೆ ಇದ್ದರೂ ಸಹವಾಸ ದೋಷದಿಂದ ಕುಡಿತದ ಚಟಕ್ಕೆ ಬಿದ್ದವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮದ್ಯವರ್ಜನ ಶಿಬಿರದ ಮೂಲಕ ತಳಹಂತದಿಂದಲೇ ಮನಸ್ಸನ್ನು ಪರಿವರ್ತನೆ ಮಾಡಿ ಮದ್ಯವ್ಯಸನಗಳಿಗೆ ಹೊಸ ಜೀವನ ನೀಡುತ್ತಿದ್ದಾರೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಕಸಬಾ ಹೋಬಳಿ ಅಧ್ಯಕ್ಷ ಕೆಸುವೆ ಮಂಜುನಾಥ್, ಪತ್ರಕರ್ತ ಯಡಗೆರೆ ಮಂಜುನಾಥ್ ಹಾಗೂ ದ್ವಾರಮಕ್ಕಿಯ ಕೃಷಿಕ ದಿವಾಕರ್ ಕುಡಿತದ ದುಷ್ಪರಿಣಾಮದ ಬಗ್ಗೆ ಮಾತನಾಡಿದರು.
ಶಶಿಕಲಾ ಸ್ವಾಗತಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು. ಧ.ಗ್ರಾ. ಯೋಜನೆಯ ತಾಲೂಕು ಮೇಲ್ವಿಚಾರಕ ಗಣೇಶ್ ವಂದಿಸಿದರು.