'ನೀರಿನ ಸಮಸ್ಯೆ ಪರಿಹರಿಸಿ'
ಮೂಡಿಗೆರೆ: ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಪಣಿಸಿರುವುದರಿಂದ ರೋಗಿಗಳು ಮತ್ತು ಅವರ ಸಹಾಯಕರಿಗೆ ತೀವ್ರ ಸಮಸ್ಯೆ ತಲೆದೋರಿದೆ. ತಕ್ಷಣ ಈ ಕುರಿತು ತಾಲೂಕು ಆಡಳಿತ ಸಮಸ್ಯೆ ಪರಿಹರಿಸಬೇಕು ಎಂದು ಮುಸ್ಲಿಂ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಕಿರುಗುಂದ ಅಬ್ಬಾಸ್ ಒತ್ತಾಯಿಸಿದರು.
ಈ ಕುರಿತು ಸೋಮವಾರ ಹೇಳಿಕೆ ನೀಡಿದ್ದು, ನಾಲ್ಕು ಲಕ್ಷ ಜನಸಂಖ್ಯೆಯುಳ್ಳ ಮೂಡಿಗೆರೆ ತಾಲೂಕಿನಲ್ಲಿ ಇರುವ ಏಕೈಕ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇದೆ.
ದಿನಂಪ್ರತಿ 200 ರಿಂದ 300 ರೋಗಿಗಳು ಚಿಕಿತ್ಸೆ ನಿಮಿತ್ತ ಬರುತ್ತಿದ್ದಾರೆ. ಆದರೆ ಮೂರ್ನಾಲ್ಕು ವೈದ್ಯರು ಬರುವ ಎಲ್ಲಾ ರೋಗಿಗಳಿಗೆ ಔಷಧಿ ನೀಡಲು ಸಾಧ್ಯವಾಗುತ್ತಿಲ್ಲ. ಎಂದು ಆರೋಪಿಸಿದ್ದಾರೆ.
ಸಿಬ್ಬಂದಿ ಕೊರತೆ: ಪ್ರತಿನಿತ್ಯ ದಾಖಲಾಗುವ 10 ರಿಂದ 12 ಒಳ ರೋಗಿಗಳನ್ನು ಉಪಚರಿಸಲು ಸಿಬ್ಬಂದಿಗಳಿಲ್ಲ. ಕೆಲವು ರೋಗಗಳಿಗೆ ಔಷಧಿ ಲಭ್ಯವಾಗುತ್ತಿಲ್ಲ. ಮಕ್ಕಳ ಮತ್ತು ಮಹಿಳೆಯರಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರಿಲ್ಲ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ್ದರೂ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಲ್ಲಿಗೆ ಬರುವ ರೋಗಿಗಳ ಸಹಿತ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸಲು ಆಡಳಿತಗಾರರು ವಿಫಲರಾಗಿದ್ದಾರೆ. ಇದರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವತ್ತ ಸರಕಾರ ಚಿಂತಿಸಬೇಕು ಎಂದು ಒತ್ತಾಯಿಸಿದ್ದಾರೆ.