ಪ್ರತ್ಯೇಕ ಪ್ರಕರಣ: ಇಬ್ಬರು ರೈತರ ಆತ್ಮಹತ್ಯೆ
ನರಸಿಂಹರಾಜಪುರ: ಪ್ರತ್ಯೇಕ ಪ್ರಕರಣದಲ್ಲಿ ಸಾಲ ಬಾಧೆ ತಾಳದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದಾವಣ, ಸಾರ್ಯ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾವಣ ಗ್ರಾಮದ ರಾಯಪ್ಪಗೌಡ(55) ಎಂಬವರು ಸೋಮವಾರ ಮಧ್ಯಾಹ್ನ ತಮ್ಮ ತೋಟದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 4 ಎಕರೆ ಜಮೀನು ಇದ್ದು, ಬ್ಯಾಂಕಿನಲ್ಲಿ 3 ಲಕ್ಷ ಇತರೆ ಕಡೆ 2 ಲಕ್ಷ ಸಾಲ ಮಾಡಿದ್ದರು. ಆದರೆ, ಈ ವರ್ಷ ಅಡಕೆ ಇಳುವರಿ ಕಡಿಮೆ ಬಂದಿತ್ತು. ಜತೆಗೆ ಅಡಕೆಗೆ ಬೇರು ಹುಳದ ಕಾಟದಿಂದ ಮರಗಳು ಹಾಳಾಗಿದ್ದವು. ಇದರಿಂದ ಬೇಸರಗೊಂಡು ತಮ್ಮ ತೋಟದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣ: ತಾಲೂಕಿನ ಹೊನ್ನೇಕೊಡಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ಯ ಗ್ರಾಮದ ಕರ್ಕೂಟದ ಕೃಷ್ಣೇಗೌಡ ಎಂಬವರು ಸೋಮವಾರ ಮಧ್ಯಾಹ್ನ ಹರೀಶ ಎಂಬವರ ಗದ್ದೆಯ ಸಮೀಪದ ದಾರಿಯ ಬದಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣೇಗೌಡರ ಮಗಳು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಇದರಿಂದ ಅವರು ಮನನೊಂದಿದ್ದರು. ಅಲ್ಲದೆ, ಕೃಷಿಗಾಗಿ ಸಾಲ ಮಾಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.