ಭರವಸೆ ಈಡೇರಿಕೆಗೆ ಯತ್ನ: ಶೋಭಾ
ಕ.ಪ್ರ.ವಾರ್ತೆ ್ಣ ತರೀಕೆರೆ ್ಣ ಮೇ 7
ಚುನಾವಣೆ ಸಮಯದಲ್ಲಿ ಪಕ್ಷ ಮತ್ತು ಕಾರ್ಯಕರ್ತರು ನೀಡಿದ ಎಲ್ಲಾ ಭರವಸೆಗಳನ್ನು ಖಂಡಿತ ಈಡೇರಿಸುತ್ತೇನೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ತಾಲೂಕು ಬಿಜೆಪಿ ವತಿಯಿಂದ ಬುಧವಾರ ಪಟ್ಟಣದ ಕೃಷ್ಣ ಸಮುದಾಯ ಭವನದಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಲು ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
ಕೆಟ್ಟ ಬರಗಾಲ ಬಂದಿದೆ: ರಾಜ್ಯ ಸರ್ಕಾರದ ವಿರೋಧಿ ನೀತಿ ಇದೆ, ರಸ್ತೆಗಳು ಹಾಳಾಗಿದೆ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ, ಹಸುಕರುಗಳಿಗೆ ಮೇವಿಲ್ಲದಂತಾಗಿದೆ. ಕೆಟ್ಟ ಬರಗಾಲ ಬಂದಿದ್ದು, ಯಾವುದೇ ಅಭಿವೃದ್ಧಿ ಈ ಸರ್ಕಾರದಿಂದ ಸಾಧ್ಯ ಇಲ್ಲ ಎಂದು ಒಂದು ವರ್ಷದಲ್ಲಿ ತೋರಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಮತ್ತೆ ಬರಲಿ ಎಂದು ಜನರೇ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ನೂರಕ್ಕೆ ನೂರರಷ್ಟು ಖಚಿತವಾಗಿ ನಮ್ಮ ಪರವಾಗಿ ಫಲಿತಾಂಶ ಬರುತ್ತದೆ. ಲೋಕಸಭಾ ಕ್ಷೇತ್ರದ ಎಲ್ಲಾ ಎಂಟು ವಿಧಾನ ಸಭಾ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆ ಗಳಿಸುತ್ತದೆ. ಇಡೀ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾಗಲಿ ಎಂದರು.
ಹೆಚ್ಚಿನ ಮುನ್ನಡೆ: ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಕಾರ್ಯಕರ್ತರು ಅಭೂತಪೂರ್ವ ಕೆಲಸ ಮಾಡಿದ್ದಾರೆ. ತರೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮುನ್ನಡೆ ಸಾಧಿಸಿ ಶೋಭಾ ಕರಂದ್ಲಾಜೆ ಅವರು ಗೆಲುವು ಸಾಧಿಸುತ್ತಾರೆ.
ಮೋದಿಯವರು ಪ್ರಧಾನಿಯಾಗುವ ಎಲ್ಲ ಮುನ್ಸೂಚನೆಗಳು ಇದೆ, ಪ್ರಧಾನಿಯಾಗುವುದು ಖಂಡಿತ ಎಂದು ತಿಳಿಸಿ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದರು.
ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಮಾತನಾಡಿ, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತಿರುವುದರಲ್ಲಿ ಬಿಜೆಪಿಯೇ ಮೊದಲು.ಎಲ್ಲ ವರ್ಗದವರಿಂದ ನಮಗೆ ಒಳ್ಳೆಯ ಸ್ವಾಗತ ದೊರೆತಿದೆ. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದ್ದೇವೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಮೋಹನಕುಮಾರ್ ಕರಕುಚ್ಚಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎನ್‌ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಆರ್. ದೇವಾನಂದ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್, ಟಿ.ಎಂ. ಭೋಜರಾಜ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್.ರಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಜಿ. ಸದಾನಂದ್, ರವಿಶಂಕರ್ ದುಗ್ಲಾಪುರ ಮಂಜುನಾಥ್, ಪಕ್ಷದ ಕಾರ್ಯಕರ್ತರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ.ಜಿ.ಸದಾನಂದ್ ನಿರೂಪಿಸಿದರು.