ಯಡದಾಳು ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು
ಕ.ಪ್ರ.ವಾರ್ತೆ ್ಣ ಶೃಂಗೇರಿ ್ಣ ಮೇ 7
ತಾಲೂಕಿನ ಮರ್ಕಲ್ ಪಂಚಾಯಿತಿ ವ್ಯಾಪ್ತಿಯ ಯಡದಾಳು, ತೋರಣಗದ್ದೆ, ಮಾಣಿಬೈಲು ಸಂಪರ್ಕ ಕಲ್ಪಿಸುವ ರಸ್ತೆ ಡಾಂಬಾರೀಕರಣಗೊಳ್ಳದೇ ದಶಕಗಳೇ ಕಳೆದಿವೆ. ಸರ್ಕಾರ, ಜಿಪಂ, ತಾಪಂ, ಸ್ಥಳೀಯ ಆಡಳಿತದ ಜನಪ್ರತಿನಿಧಿಗಳು ಈ ಕಿತ್ತೆದ್ದ ಹೊಂಡಗುಂಡಿಗಳಿಂದ ಕೂಡಿದ ರಸ್ತೆ ಮೇಲೆ ಓಡಾಡಿದರೂ ಇದುವರೆಗೆ ಗಮನ ಹರಿಸಿಲ್ಲ.
ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ 13ರ ನೆಮ್ಮಾರಿಗೆ ಸಂಪರ್ಕ ಕಲ್ಪಿಸುವ ಇದು ಮುಖ್ಯ ರಸ್ತೆಯೂ ಹೌದು.
ನಕ್ಸಲ್ ಪ್ರಭಾವಿತ ಪ್ರದೇಶಗಳಾದ ದಿಂದೋಡಿ, ಸುಂಕದಮಕ್ಕಿ, ಯಡದಳ್ಳಿ, ಹೆಕ್ತೂರು, ಹೊಳೆಹೊದ್ದು ಸೇರಿದಂತೆ 30 ಕ್ಕೂ ಅಧಿಕ ಹಳ್ಳಿಗಳ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರೂ, ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಆಶ್ಚರ್ಯವೇ ಸರಿ.
ಉಡುಪಿ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ವಿವಿಧೆಡೆಗಳಿಂದ ಬರುವ ಪ್ರವಾಸಿಗರು ಈ ಮಾರ್ಗದಲ್ಲಿಯೇ ಹೆಚ್ಚಾಗಿ ಸಂಚರಿಸುತ್ತಾರೆ.
ಸಿರಿಮನೆ ಜಲಪಾತ, ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯವಿದೆ. ಅಲ್ಲದೇ ಸುತ್ತಮುತ್ತಲ ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕೇಂದ್ರ ಬಿಂದುವಾಗಿದೆ.
ಕಿತ್ತೆದ್ದ ಈ ಮಾರ್ಗದಲ್ಲಿ ಖಾಸಗಿ ವಾಹನಗಳ ಸಂಚಾರ ಬಿಟ್ಟರೆ ಕಾಲ್ನಡಿಗೆಯೇ ಗತಿ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸೇರಿದಂತೆ ಗ್ರಾಮಸ್ಥರು ಕಾಲ್ನಡಿಯಲ್ಲಿಯೇ ಈ ರಸ್ತೆಯಲ್ಲಿ ಓಡಾಡಬೇಕು. ತುರ್ತು ಚಿಕಿತ್ಸೆಗೆ ಬರಬೇಕಾದರೆ ಪರದಾಡುವ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರಿಗೆ.
ಇನ್ನು ಯಡದಳ್ಳಿ ಕಾಲೋನಿಯಲ್ಲಿ 30 ಕ್ಕೂ ಅಧಿಕ ಕುಟುಂಬಗಳಿವೆ. ಇಲ್ಲಿನ ಸುತ್ತಮುತ್ತಲ ಗ್ರಾಮಗಳು ನಕ್ಸಲ್ ಪ್ರಭಾವಿತ ಪ್ರದೇಶಗಳಾಗಿದ್ದರೂ, ನಕ್ಸಲ್ ಪ್ಯಾಕೇಜ್ ಅಭಿವೃದ್ಧಿ ಕಾಮಗಾರಿಗಳು ಇಲ್ಲಿಗೆ ಅನ್ವಯಿಸದಿರುವುದು ಆಶ್ಟರ್ಯ.
ಹುಸಿ ಭರವಸೆ: ಕೆಲ ವರ್ಷಗಳ ಹಿಂದೆ ಇಲ್ಲಿ ಜನಸ್ಪಂದನ ಸಭೆಯೂ ನಡೆದು, ಉನ್ನತ ಅಧಿಕಾರಿಗಳು ಪಾಲ್ಗೊಂಡು ಇಲ್ಲಿನ ಗ್ರಾಮಸ್ಥರ ಅಹವಾಲು, ಮನವಿಗಳನ್ನು ಸ್ವೀಕರಿಸಿ ಭರವಸೆ ನೀಡಿದ್ದರು. ಆದರೆ ಇಲ್ಲಿನ ಗ್ರಾಮಸ್ಥರಿಗೆ ಮಾತ್ರ ಮಣ್ಣು ರಸ್ತೆಯೇ ಗತಿಯಾಗಿದೆ.ಇಲ್ಲಿನ ಗ್ರಾಮಸ್ಥರು ಯಡದಳ್ಳಿ, ದಿಂದೋಡಿ, ಹುಲುಗಾರು ಮೂಲಕ ಸುಮಾರು 15 ಕ್ಕೂ ಅಧಿಕ ಕಿಲೋಮೀಟರ್ ಪ್ರಯಾಣಿಸಿ, ಶೃಂಗೇರಿಗೋ, ನೆಮ್ಮಾರಿಗೋ ಬರಬೇಕು. ಆದರೂ ನಮ್ಮ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ದಶಕಗಳಿಂದಲೂ ಇರುವ ಈ ಸಮಸ್ಯೆ ಅರ್ಥವಾಗದಿರುವುದು ವ್ಯವಸ್ಥೆಯ ದುರಂತವಾಗಿದೆ.
ಮಳೆಗಾಲದಲ್ಲಿ ಮಳೆ ನೀರೆಲ್ಲ ರಸ್ತೆಯ ಮೇಲೆಯೇ ಹರಿದಾಡುವುದರಿಂದ ರಸ್ತೆಯೂ ಹೌದು, ಚರಂಡಿಯೂ ಹೌದು. ಅಭಿವೃದ್ದಿ ಕಾಮಗಾರಿಯಲ್ಲಿ ಇಂತಹ ಕುಗ್ಗಾಮಗಳ ರಸ್ತೆಗಳ ಅಭಿವೃದ್ಧಿಗೆ ಮುಂದಾಗದಿರುವುದು ಇಲ್ಲಿನ ಗ್ರಾಮಸ್ಥರನ್ನು ಮೂಲ ಸೌಕರ್ಯಗಳಿಂದ ವಂಚಿತರನ್ನಾಗಿಸುವಂತಿದೆ.
ಇನ್ನಾದರೂ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿದಿಗಳು ಇತ್ತ ಗಮನಹರಿಸಿ ಈ ರಸ್ತೆ ದುರಸ್ತಿಗೆ ಮುಂದಾಗಿ ಈ ಭಾಗದ ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ಅನುಕೂಲವಾಗುವಂತೆ ಮಾಡಿಕೊಡಲಿ ಎಂಬುದೇ ಎಲ್ಲರ ಆಶಯ.