ಶಾಸಕ ರವಿ, ಸುನೀಲ್ ಬಂಧನಕ್ಕೆ ಆಗ್ರಹ
ಚಿಕ್ಕಮಗಳೂರು: ಜನಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿರುವ ಶಾಸಕರಾದ ಸಿ.ಟಿ. ರವಿ ಹಾಗೂ ವಿ. ಸುನೀಲ್ ಕುಮಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಗುರುವಾರದಂದು ದೂರು ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ತನಿಕೋಡುವಿನಲ್ಲಿ ನಡೆದ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಸಂಘಪರಿವಾರದ ಕೆಲವು ಮುಖಂಡರು ಮತ್ತೆಮತ್ತೆ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಈ ಪ್ರಕರಣದ ಆರೋಪಿಯಾಗಿರುವ ಎಎನ್‌ಎಫ್ ಸಿಬ್ಬಂದಿಯ ಅಪರಾಧ ಸಮರ್ಥಿಸಿಕೊಳ್ಳುವಂತಹ ಮಾತ ಆಡುತ್ತಿದ್ದಾರೆ ಎಂದು ಹೇಳಿದರು.
ಶೂಟೌಟ್ ಸಮರ್ಥನೆ: ಜಾನುವಾರು ಸಾಗಾಟ ನಿಲ್ಲಬೇಕಾದರೆ ಈ ರೀತಿಯ ಹೆಚ್ಚು ಹೆಚ್ಚು ಕೃತ್ಯಗಳು ನಡೆಯಬೇಕಿದೆ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ಸುನೀಲ್ ಕುಮಾರ್ ನೀಡಿದ್ದಾರೆ. ಶಾಸಕ ಸಿ.ಟಿ. ರವಿ ಕೂಡಾ ಶೂಟೌಟ್ ಸಮರ್ಥಿಸಿಕೊಂಡಿದ್ದಾರೆ.
ಇವರು ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ಶಾಸನಸಭೆಗೆ ಅಪಚಾರ ಮಾಡಿದ್ದಾರೆ. ಜನಪ್ರತಿನಿಧಿ ಕಾಯ್ದೆ ಉಲ್ಲಂಘಿಸಿರುವುದರಿಂದ ಅವರನ್ನು ಬಂಧಿಸಬೇಕು ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್, ಕೇಂದ್ರ ಸಮಿತಿ ಸದಸ್ಯ ಯೂಸೂಫ್ ಹಾಜಿ ಹಾಗೂ ಪ್ರಗತಿಪರ ಚಿಂತಕರ ವೇದಿಕೆಯ ಕೃಷ್ಣಮೂರ್ತಿ ಇದ್ದರು.