ಜಿಟಿ, ಜಿಟಿ ಮಳೆಗೆ ಜನರ ಪರದಾಟ
ನರಸಿಂಹರಾಜಪುರ: ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ಜಿಟಿ, ಜಿಟಿ ಮಳೆ ಸುರಿದಿದ್ದು ಮಳೆ ನಿರೀಕ್ಷೆ ಇಲ್ಲದ ಜನರು ಸ್ವಲ್ಪ ಪರದಾಡುವಂತಾಯಿತು.
ಬೆಳಗ್ಗೆ ಸಣ್ಣ ಪ್ರಮಾಣದಲ್ಲಿ ಶುರುವಾದ ಮಳೆ ಮಧ್ಯಾಹ್ನ ನಂತರ ಬಿರುಸುಗೊಂಡು ಮಳೆಗಾಲದ ವಾತಾವರಣ ಸೃಷ್ಟಿಯಾಯಿತು. ಛತ್ರಿ ಇಲ್ಲದೆ ಮನೆಯಿಂದ ಹೊರಗೆ ಬಂದ ಜನ ಮಳೆಯಿಂದ ಬಸ್ಸು ನಿಲ್ದಾಣ, ಅಂಗಡಿಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆಯುವಂತಾಯಿತು.
ಮೋಟಾರ್ ಬೈಕ್ ಇದ್ದವರು ರೈನ್ಕೋಟ್ ಇಲ್ಲದೆ ಮಳೆಯಲ್ಲೇ ಬೈಕ್ ಸವಾರಿ ಮಾಡಬೇಕಾಯಿತು. ಸಂಜೆ ಹೊತ್ತಿಗೆ ಮಳೆಯಿಂದಾಗಿ ಥಂಡಿ ವಾತಾವರಣ ಉಂಟಾಗಿತ್ತು. ಬೇಸಿಗೆ ಬತ್ತ ಬೆಳೆದ ರೈತರು ಮಳೆಯಿಂದ ಕಂಗಾಲಾಗಿದ್ದು, ಮಳೆ ಮುಂದುವರಿದರೆ ಗತಿ ಏನು ಎಂದು ಚಿಂತೆಗೀಡಾಗಿದ್ದಾರೆ.
ಲಾರಿ ಚರಂಡಿಗೆ: ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಟಾರು ರಸ್ತೆಯ ಪಕ್ಕದಲ್ಲಿ ಹಾಕಿರುವ ಮಣ್ಣು ಕೆಸರು ಗದ್ದೆಯಂತಾಗಿದ್ದು, ಗುರುವಾರ ಬೆಳ್ಗಗೆ ಗುಡ್ಡೇಹಳ್ಳದ ಸಮೀಪದ ಮುಖ್ಯ ರಸ್ತೆಯ ಬದಿಗೆ ಹೋದ ನಾಟಾ ತುಂಬಿದ ಲಾರಿಯು ಚರಂಡಿಗೆ ಹೋಗಿ ಸಿಕ್ಕಿ ಬಿದ್ದಿದೆ. ನಂತರ ಹಿಟಾಚಿ ಯಂತ್ರ ತಂದು ಲಾರಿಯನ್ನು ಎಳೆಯ ಬೇಕಾಯಿತು.