ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಧು
ಬೇಲೂರು: ಹಸೆಮಣಿ ಏರಬೇಕಿದ್ದ ಯುವತಿಯೋರ್ವಳು ವಿವಾಹದ ಮುನ್ನಾ ದಿನ ಮಾತ್ರೆಗಳನ್ನು ಸೇವಿಸಿದ ಘಟನೆ ಗುರುವಾರ ನಡೆದಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಲಿ ಸೂರುಕೋಡು ಗ್ರಾಮದ ಎಸ್.ವಿ. ಕೃಷ್ಣ ಮತ್ತು ಚಂದ್ರಾವತಿ ಎಂಬುವರ ಪುತ್ರಿ ಹರಿಣಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಆಕೆಯನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದರ ಪರಿಣಾಮ ವಿವಾಹ ರದ್ದಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಈಶ್ವರಪ್ಪ ಹಾಗೂ ಯಶೋಧಮ್ಮ ಎಂಬುವರ ಪುತ್ರ ವೆಂಕಟೇಶ್ ಎಂಬವರೊಂದಿಗೆ ಹರಿಣಿಯ ವಿವಾಹ ನಿಶ್ಚಯವಾಗಿತ್ತು. ಇದಕ್ಕಾಗಿ ಹರಣಿಯ ಪೋಷಕರು ಅದ್ಧೂರಿಯಾಗಿ ತಯಾರಿ ಮಾಡಿಕೊಂಡಿದ್ದರು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಮೇ 7ರಂದು ಸಂಜೆ ಆರತಕ್ಷತೆ ಇನ್ನಿತರೆ ಪೂಜಾ ಸಿದ್ಧತೆಯಲ್ಲಿ ತೊಡಗಿರುವಾಗ ಹರಿಣಿ ವಿಷಕಾರಿ ಮಾತ್ರೆಗಳ ಸೇವನೆ ಮಾಡಿ ಅಸ್ವಸ್ಥಳಾಗಿದ್ದಳು. ವಿಷಯ ತಿಳಿದ ಹರಿಣಿಯ ಸಂಬಂಧಿಕರು ಅವಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ವಧು ವಿಚಾರಿಸಿದ ವರ: ವರ ವೆಂಕಟೇಶ್ ಅವರ ಕಡೆಯವರು 3 ಬಸ್ಗಳಲ್ಲಿ ತರೀಕೆರೆಯಿಂದ ಬೇಲೂರಿಗೆ ಬರುವ ಸಂದರ್ಭದಲ್ಲಿ ವಧು ಹರಿಣಿ ಮಾತ್ರೆ ಸೇವಿಸಿರುವ ವಿಚಾರ ತಿಳಿದಿದೆ. ನಂತರ ವಾಸ್ತವ ಅಂಶ ತಿಳಿಯಲು ಬೇಲೂರಿಗೆ ವರನ ಕಡೆಯವರು ಬಂದಿದ್ದಾರೆ. ಆದರೆ ವರ ವೆಂಕಟೇಶ್ ಅವರು ಚಿಕ್ಕಮಗಳೂರಿಗೆ ತೆರಳಿ ಹರಿಣಿಯ ಯೋಗಕ್ಷೇವು ವಿಚಾರಿಸಿದ್ದಾರೆ.
ಇಷ್ಟಾದ ಬಳಿಕ ವಿವಾಹ ನಿಂತು ಹೋಗಿದ್ದು, ವಿವಾಹಕ್ಕೆ ಏರ್ಪಡಿಸಿದ್ದ ಸಿದ್ಧತೆಗಳೆಲ್ಲ ವ್ಯರ್ಥವಾಗಿದೆ.