ಕಾಯಕಲ್ಪಕ್ಕೆ ಕಾದಿದೆ ಕಟ್ಟಡ
ಶೃಂಗೇರಿ: ಪಟ್ಟಣದ ಮಧ್ಯ ಭಾಗದಲ್ಲಿರುವ ತಾಲೂಕು ಕಚೇರಿ ಕಟ್ಟಡ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಇಲ್ಲಿ ನಿತ್ಯ ಅಧಿಕಾರಿಗಳ, ಜನಪ್ರತಿನಿಧಿಗಳು ಆಗಮಿಸುತ್ತಿದ್ದರೂ ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು, ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಈ ಕಟ್ಟಡದ ಶಿಥಿಲಾವಸ್ಥೆಯಲ್ಲಿದೆ. 1984ರಲ್ಲಿ ಅಂದಿನ ಲೋಕೋಪಯೋಗಿ ಸಚಿವ ಎಚ್.ಡಿ. ದೇವೇಗೌಡರಿಂದ ಶಂಕುಸ್ಥಾಪನೆಗೊಂಡು 6 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡಿತು. 1990ರಲ್ಲಿ ಅಂದಿನ ಸರ್ಕಾರದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ರಿಂದ ಉದ್ಘಾಟನೆಗೊಂಡಿತು.
ನಂತರದ ದಿನಗಳಲ್ಲಿ ಕಚೇರಿ ಕಾರ್ಯಚಟುವಟಿಕೆಗಳು ನಡೆಯುತ್ತಾ ಬಂದರೂ ಮೂಲ ಸೌಲಭ್ಯ ಕಲ್ಪಿಸಲಿಲ್ಲ. ಗೋಡೆ ಬಿರುಕು ಬಿಟ್ಟಿವೆ. ಸುಣ್ಣ- ಬಣ್ಣ ಕಾಣದೆ ಪಾಚಿಗಟ್ಟಿವೆ. ವಿದ್ಯುತ್ ಸಂಪರ್ಕಕ್ಕೆ ಅಳವಡಿಸಲಾಗಿರುವ ಕೆಲ ಉಪಕರಣಗಳು ಅಸ್ತವ್ಯಸ್ತಗೊಂಡು ಕಿತ್ತೆದ್ದು ನಿಂತಿವೆ. ಕಟ್ಟಡದ ಒಳಭಾಗದಲ್ಲಿ ಕೆಲ ಕೊಠಡಿಗಳು ಸೋರುತ್ತಿವೆ. ಸಮರ್ಪಕ ನೀರಿನ ವ್ಯವಸ್ಥೆಯಿಲ್ಲ. ಶೌಚಾಲಯವಿದ್ದರೂ ಅವ್ಯವಸ್ಥೆಯ ಗೂಡಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮೂಲ ಸೌಕರ್ಯ ಕಲ್ಪಿಸಲು ಗಮನಹರಿಸುವರೇ?