ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಿ

Mainashree
Updated On : 12 May 2014, 10:50 am

ಚಿಕ್ಕಮಗಳೂರು: ಜಿಲ್ಲಾದ್ಯಂತ ಅಡಕೆ ಬೆಳೆಗಾರರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದು, ಸರ್ಕಾರ ಬೆಳೆಗಾರರ ಆತ್ಮಹತ್ಯೆ ತಡೆಯಲು ಕೂಡಲೇ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಆಗ್ರಹಿಸಿದ್ದಾರೆ.
ನರಸಿಂಹರಾಜಪುರದ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾವಣ ಗ್ರಾಮದ ಅಡಕೆ ಬೆಳೆಗಾರರ ರಾಯಪ್ಪಗೌಡ ಹಾಗೂ ಅದೇ ತಾಲೂಕಿನ ಸಾರ್ಯ ಗ್ರಾಮದ ಕೃಷ್ಣೇಗೌಡ ಹಾಗೂ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಚೆನ್ನಕೇಶವ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತರೀಕೆರೆ, ಕಡೂರು, ಕೊಪ್ಪ, ಶೃಂಗೇರಿ ತಾಲೂಕುಗಳು ಸೇರಿದಂತೆ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 2001ರಿಂದ 2011 ರವರೆಗೆ ಸುಮಾರು 968 ಅಡಕೆ ಬೆಳೆಗಾರರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಫಸಲು ಹಾನಿ: ನ.ರಾ. ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಅಡಕೆ ತೋಟಕ್ಕೆ ಬೇರುಹುಳ ರೋಗದಿಂದ ಸಂಪೂರ್ಣ ಫಸಲು ನಾಶವಾಗಿದ್ದು, ಫಸಲು ಇಲ್ಲದ ಕಾರಣ ಬ್ಯಾಂಕ್ನಲ್ಲಿ ಮಾಡಿದ ಸಾಲ ತೀರಿಸಲಾಗದೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಯು.ಡಿ. ರಿಪೋರ್ಟ್ನಲ್ಲಿ ವರದಿಯಾಗಿದೆ ಹಾಗೂ ಜಿಲ್ಲಾದ್ಯಂತ ಹಲವಾರು ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದಕ್ಕೆ ಮುಖ್ಯ ಕಾರಣ ರೈತರಿಗೆ ಬ್ಯಾಂಕ್ಗಳಿಂದ ಸಾಲ ವಸೂಲಾತಿಗೆ ನೋಟಿಸ್ ಜಾರಿ. ಈ ನೋಟಿಸ್ ರೈತನ ಕೈ ಸೇರಿದಾಗ ಸಮಾಜದಲ್ಲಿ ಮುಜುಗರಕ್ಕೆ ಒಳಗಾಗಿ ರೈತರು ಸರಣಿ ಆತ್ಮಹತ್ಯೆಗೆ ಕೈಹಾಕಿದ್ದಾರೆ. 2013 ರಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆಯಾಗಿದ್ದರಿಂದ ಅಡಕೆ ಫಸಲಿಗೆ ಕೊಳೆರೋಗ ತಗುಲಿ ರೈತರು ಅಡಕೆ ಫಸಲು ಸಂಪೂರ್ಣ ನಾಶವಾಗಿದೆ. ಹಾಗೆ ಕಾಫಿ, ಏಲಕ್ಕಿ, ಕಾಳುಮೆಣಸು, ತೆಂಗು ನಿರೀಕ್ಷೆಯ ಮಟ್ಟದಲ್ಲಿ ಫಸಲು ಇಲ್ಲದೆ. ರೈತರು ಕಂಗೆಟ್ಟಿದ್ದಾರೆ.
ನ್ಯಾಯ ನಿಶ್ಚಿತ: ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದೆ ಅಡಕೆ ಬೆಳೆಗಾರರ ಸಾಲ ಮನ್ನಾ ವಿಚಾರಣೆಯ ಹಂತದಲ್ಲಿ ಇರುವುದರಿಂದ ರೈತರು ಕಂಗಾಲಾಗುವ ಅಗತ್ಯವಿಲ್ಲ. ನ್ಯಾಯಾಲಯದಲ್ಲಿ ಅಡಕೆ ಬೆಳೆಗಾರರಿಗೆ ನ್ಯಾಯ ಸಿಗುವುದು ನಿಶ್ಚಿತ. ಸಾಲ ಮನ್ನಾ ವಿಚಾರವನ್ನು ಕಾನ್ಸಿಟಿಟ್ಯೂಷನ್ ಎಂಪವರ್ಮೆಂಟ್ ಕಮಿಟಿ ಮುಂದೆ ಹಾಕುವ ಎಲ್ಲಾ ಸಾಧ್ಯತೆ ಇದು. ರೈತರು ಆತ್ಮಹತ್ಯೆಯಂತಹ ಪ್ರಕ್ರಿಯೆಗೆ ಮುಂದಾಗಬಾರದೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement