ಸಾಮೂಹಿಕ ವಿವಾಹದಿಂದ ಅನಗತ್ಯ ಖರ್ಚಿಗೆ ಕಡಿವಾಣ
ಮೂಡಿಗೆರೆ: ಸಾಮೂಹಿಕ ಮದುವೆ ಮಾಡಿಕೊಂಡು ಅನಗತ್ಯ ಖರ್ಚಿಗೆ ಕಡಿವಾಣ ಹಾಕಬೇಕು ಎಂದು ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಅಮೃತಸಭಾ ಭವನದಲ್ಲಿ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ತಾಳಿಗೆ ವಿಶೇಷ ಮಹತ್ವ ನೀಡುವುದರೊಂದಿಗೆ ತಾಳಿ ಭಾಗ್ಯ ಇನ್ನು ಜೀವಂತವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಶ್ರೀಕ್ಷೇತ್ರವು ಹಲವು ವರ್ಷಗಳಿಂದ ಜನಪಯೋಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಶ್ರೀಕ್ಷೇತ್ರವು ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಸಪ್ತಪದಿ ಯೋಜನೆ, ಸಾಮೂಹಿಕ ಉಪನಯನ, ಗೃಹಲಕ್ಷ್ಮೀ ಯೋಜನೆಯಡಿ ಉಚಿತ ಹೆಂಚು ವಿತರಣೆ, ಆನಂದ ಜ್ಯೋತಿ ಯೋಜನೆ, ಅನ್ನ ದಾಸೋಹ ಯೋಜನೆ, ಮಹಿಳಾ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಧನ್ವಂತರಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಉಪಕರಣ ನೀಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿದೆ ಎಂದರು.
ರಾಜಲಕ್ಷ್ಮೀ ಭಿ. ಜೋಷಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಚಂದ್ರು, ತಾಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ. ಶೇಷಗಿರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾಹರಿ ಪೂಜಾರಿ, ಜೆಡಿಎಸ್ ಕಳಸ ಹೋಬಳಿ ಅಧ್ಯಕ್ಷ ಮಹಮದ್ ರಫಿಕ್, ಬಿಜೆಪಿ ಕಳಸ ಬ್ಲಾಕ್ ಅಧ್ಯಕ್ಷ ನಾಗೇಶ್ ಭಟ್ ತಲಗೋಡು ಇದ್ದರು. 33 ಜೋಡಿ ವಧು- ವರರು ಸತಿ ಪತಿಗಳಾಗಿ ಗೃಹಸ್ಥಾಶ್ರಮ ಸ್ವಿಕರಿಸಿದರು. ತಂತ್ರಿ ವೇದ ಬ್ರಹ್ಮಶ್ರೀ ಉದಯಶಂಕರ್ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನಡೆಯಿತು.
ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಸೇರಿದಂತೆ ಮೊದಲಾದ ಉಪಕರಣ ವಿತರಿಸಲಾಯಿತು.