ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ತ್ರೀಯರ ಗೌರವ ಹೆಚ್ಚಿಸಿದ ಹೇಮರೆಡ್ಡಿ ಮಲ್ಲಮ್ಮ

Mainashree
Updated On : 13 May 2014, 10:18 am

ಚಿಕ್ಕಮಗಳೂರು: ತ್ಯಾಗ, ಸಹನೆ, ಕಷ್ಟಸಹಿಷ್ಣುತೆಗೆ ಪ್ರತೀಕವಾಗಿದ್ದ ಮಲ್ಲಮ್ಮನಂತಹ ಮಗಳು ಮತ್ತು ಸೊಸೆ ಇಂದಿನ ಕುಟುಂಬ ವ್ಯವಸ್ಥೆಗೆ ಅಗತ್ಯ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ಹೇಳಿದರು.
ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಹೆಬ್ಬೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 587ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿನಮ್ರ ನಡತೆ, ಸದ್ಗುಣಗಳ ಗಣಿಯಾಗಿದ್ದ ಮಲ್ಲಮ್ಮ,  ಹುಟ್ಟಿದ ಮನೆ ಮತ್ತು ಕೊಟ್ಟ ಮನೆ ಎರಡನ್ನೂ ಬೆಳಗಿದ ಮಹಾಶರಣೆ. ಅನಕ್ಷರಸ್ಥೆಯಾದರೂ ಕಾಯಕ ನಿಷ್ಠೆಯಿಂದ ಸ್ತ್ರೀ ಕುಲದ ಗೌರವ ಹೆಚ್ಚಿಸಿದವರು. ನಾಡು, ನುಡಿ, ಸಮಾಜ, ಮನುಕುಲಕ್ಕೆ ನೆರವಾದವರನ್ನು ನೆನಪಿಸಿಕೊಳ್ಳುತ್ತೇವೆ. ಅವರು ನಮ್ಮ ಮಧ್ಯೆ ತಮ್ಮ ಪ್ರಖರ ವಿಚಾರಗಳಿಂದಾಗಿ ಇದ್ದಾರೆಂದು ಭಾವಿಸುತ್ತೇವೆ.  ಮಹಾತ್ಮರನ್ನು ಸಮಾಜಕ್ಕೆ ಅನುಗುಣವಾಗಿ ವಿಂಗಡಿಸಿದರೆ ಅವರ ಮಹತ್ವ ಕಡಿಮೆ ಮಾಡಿದಂತಾಗುತ್ತದೆ ಎಂದ ಅವರು, ಗಾಂಧಿ, ಬಸವ, ಅಂಬೇಡ್ಕರ್, ಕನಕ, ಪುರಂದರ, ಮಲ್ಲಮ್ಮ ಇವರ ಜಯಂತ್ಯುತ್ಸವ ಎಲ್ಲ ವರ್ಗದ ಜನರೂ ಒಟ್ಟಾಗಿ ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.
ಲಕ್ಷ್ಮೇಶ್ವರದ ಡಾ. ಜಯ ಮಲ್ಲಿಕಾರ್ಜುನ ಹೊಸಮನಿ ಉಪನ್ಯಾಸ ನೀಡಿ, ಗುರು, ಲಿಂಗ, ಜಂಗಮ ಪ್ರೇಮಿಯಾಗಿದ್ದ ಮಲ್ಲಮ್ಮ ಸಾದ್ವಿ ಶಿರೋಮಣಿ. ತಾಳ್ಮೆಗಿಂತ ತಪಸ್ಸಿಲ್ಲ. ಸಂಸ್ಕಾರ ನೀಡಿದರೆ ಕಲ್ಲು ಮೂರ್ತಿ ಆಗುವಂತೆ ಮಲ್ಲಮ್ಮನ ಆದರ್ಶವನ್ನು ಮಕ್ಕಳಲ್ಲಿ ಬಿತ್ತಬೇಕೆಂದರು.
ರಸ್ತೆ ದುರಸ್ತಿ: ತರೀಕೆರೆ ಶಾಸಕ ಜಿ.ಎಸ್. ಶ್ರೀನಿವಾಸ ಮಾತನಾಡಿ, ಬೀರೂರು- ಅಜ್ಜಂಪುರ ಹೆದ್ದಾರಿಗೆ ಹಣ ಮೀಸಲಿಟ್ಟಿದ್ದು, 2-3 ತಿಂಗಳಲ್ಲಿ ದುರಸ್ತಿ ಪ್ರಾರಂಭಗೊಳ್ಳಲಿದೆ. ಈ ಹಿಂದೆ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪಡೆದು ಕೆಲಸ ಮಾಡದ ಗುತ್ತಿಗೆ ರದ್ದುಪಡಿಸಿ ಹೊಸ ಟೆಂಡರ್ ಕರೆಯುವ ಪ್ರಕ್ರಿಯೆ ನಡೆದಿದೆ ಎಂದರು.
ಬಡಗನಾಡು ಹೇಮರೆಡ್ಡಿ ವೀರಶೈವ ಜನಾಂಗ ಸಂಘದ ಗಿರಿಯಾಪುರ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಸಿ. ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ರೆಡ್ಡಿ ಸಹಕಾರ ಬ್ಯಾಂಕ್ ಸ್ಥಾಪಿಸುವುದರೊಂದಿಗೆ ಕೇಂದ್ರ ಆಡಳಿತ ಕಚೇರಿ ಜತೆಗೆ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಚನ್ನಾಪುರದಲ್ಲಿ ಮುಂದಿನ ವರ್ಷ ಜಯಂತಿ ಹಮ್ಮಿಕೊಳ್ಳಲಾಗುವುದೆಂದು ಪ್ರಕಟಿಸಿದರು.
ಕಡೂರು ಶಾಸಕ ವೈಎಸ್ವಿ ದತ್ತ, ಮಾಜಿ ಶಾಸಕರಾದ ಡಿ.ಎಸ್. ಸುರೇಶ್ ಮತ್ತು ಬಿ.ಆರ್. ನೀಲಕಂಠಪ್ಪ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯರು, ಜೇವರ್ಗಿಯ ಬಸವಕಬೀರ ಸ್ವಾಮೀಜಿ, ಎರೆಹೊಸಳ್ಳಿಯ ವೇಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಿಪಂ ಅಧ್ಯಕ್ಷೆ ಪದ್ಮ ಚಂದ್ರಪ್ಪ, ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಧ್ರುವಕುಮಾರ್ ಮತ್ತು ತಿಪ್ಪೇರುದ್ರಯ್ಯ, ಉಪಾಧ್ಯಕ್ಷೆ ಅನ್ನಪೂರ್ಣ ಚನ್ನಕೇಶವ, ಸದಸ್ಯರಾದ ಕೃಷ್ಣಮೂರ್ತಿ, ಕೆ.ಆರ್. ಆನಂದಪ್ಪ, ಎಸ್.ಬಿ. ಆನಂದಪ್ಪ, ಮಾಜಿ ಸದಸ್ಯ ಎ.ಸಿ. ಚಂದ್ರಪ್ಪ, ನಿವೃತ್ತ ಅಧೀನ ಕಾರ್ಯದರ್ಶಿ ಎಚ್.ಸಿ. ರಾಜಪ್ಪ ಮುಖ್ಯ ಅತಿಥಿಗಳಾಗಿದ್ದರು. ದಾನಿಗಳಾದ ವಿಮಲಾ ಮತ್ತು ಸೋಮಶೇಖರಪ್ಪ, ಜಿ.ಪಿ. ನೀಲಾಂಬಿಕೆ, ಜಗದೀಶ್, ತೋಂಟದಾರ್ಯ, ಬಸವರಾಜಪ್ಪ, ಜಿ.ಸಿ. ಶಿವಲಿಂಗಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಡಗನಾಡು ಹೇಮರೆಡ್ಡಿ ವೀರಶೈವ ಜನಾಂಗ ಸಂಘದ ಹೆಬ್ಬೂರು ಘಟಕದ ಅಧ್ಯಕ್ಷ ಎಚ್.ಎಂ. ಜಯಪ್ಪ ಸ್ವಾಗತಿಸಿ, ಕಾರ್ಯದರ್ಶಿ ಎಚ್.ಎಸ್. ಈಶ್ವರಪ್ಪ ಪ್ರಾಸ್ತಾವಿಸಿದ್ದು, ಖಜಾಂಚಿ ಪ್ರಸನ್ನಕುಮಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement