ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉಚಿತ ಚಿಕಿತ್ಸೆ ನೀಡುವತ್ತ ಚಿತ್ತೈಸಿ

Lingaraj Badiger
Updated On : 14 May 2014, 11:06 am

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಮೇ 13
ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ದುಬಾರಿ ಆಗಿರುವ ಕಾರಣದಿಂದ ವೈದ್ಯಕೀಯ ವಿಮಾ ಸೌಲಭ್ಯವಿಲ್ಲದೆ ಆಸ್ಪತ್ರೆಗೆ ಹೋಗದ ಸ್ಥಿತಿ ನಿರ್ಮಾಣ ಆಗಿದೆ ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಸಂಗಮೇಶ್ವರ ಪೇಟೆಯ ದೇವದಾನ ಗ್ರಾಮದಲ್ಲಿ ಮಂಗಳವಾರ ನಡೆದ ಪ್ರೀತಾಂಜಲಿ ಮಕ್ಕಳ ಆರೈಕೆ ಮತ್ತು ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕಾಲೇಜುಗಳ ಶುಲ್ಕ ಹೆಚ್ಚಾಗಿರುವ ಕಾರಣದಿಂದ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ಶುಲ್ಕ ಹೆಚ್ಚಾಗಿದೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಉಚಿತವಾಗಿ ವೈದ್ಯಕೀಯ ಶಿಕ್ಷಣದ ಸೀಟು ಪಡೆಯುವವರು ಉಚಿತವಾಗಿ ಚಿಕಿತ್ಸೆ ನೀಡುವ ಮನೋಭಾವ ಬೆಳೆಸಿಕೊಂಡಿದ್ದರೆ ಇಂದು ವೈದ್ಯಕೀಯ ಕ್ಷೇತ್ರ ಇಷ್ಟೊಂದು ದುಬಾರಿಯಾಗುತ್ತಿರಲಿಲ್ಲ ಎಂದರು.
ಇಂದು ತಕ್ಷಣದ ಲಾಭಕ್ಕಾಗಿ ಎಲ್ಲರೂ ಯೋಚಿಸುತ್ತಿರುವುದರಿಂದ ಹಣದ ಶ್ರೀಮಂತಿಕೆ ಅಧಿಕವಾಗಿದ್ದು, ಹೃದಯ ಶ್ರೀಮಂತಿಕೆ ಇಲ್ಲದಂತಾಗಿದೆ, ನಮ್ಮ ದುಡಿಮೆಯಲ್ಲಿನ ಒಂದು ಭಾಗವನ್ನು ಸಮಾಜಕ್ಕೆ ಉಪಕಾರವಾಗುವ ರೀತಿಯಲ್ಲಿ ನೀಡಿದರೆ, ದೇವರ ಜೊತೆಗೆ ಜನಮೆಚ್ಚುವ ಕೆಲಸವಾಗಲಿದೆ.
 ಈ ಆಸ್ಪತ್ರೆಗೆ ಉಚಿತವಾಗಿ ಜಾಗ ನೀಡುವುದರ ಜೊತೆಗೆ ಕಟ್ಟಡವನ್ನು ಉಚಿತವಾಗಿ ಕಟ್ಟಿಸಿ ನೀಡಿರುವ ರುಡಾಲ್ಫ್ ಮಸ್ಗಲೇನಸ್ರ ಕಾರ್ಯ ದೇವರ ಜೊತೆಗೆ ಜನ ಮೆಚ್ಚುವ ಕಾರ್ಯವಾಗಿದೆ ಎಂದರು.
ಪ್ರೀತಿಯೇ ದೇವರು:  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರು ಪ್ರಾಂತ್ಯದ ಬಿಷಪ್ ಟಿ.ಅಂತೋಣಿ ಸ್ವಾಮಿ, ದೇವರ ಇನ್ನೊಂದು ಹೆಸರೇ ಪ್ರೀತಿ. ನಾವು ಯಾವುದೇ ಧರ್ಮ ಮತ್ತು ಜಾತಿಗೆ ಸೇರಿರಲಿ, ಬಡವರು ಮತ್ತು ನಿರ್ಗತಿಕರಿಗೆ ಆತ ಒಂದಿಲ್ಲೊಂದು ರೀತಿಯಲ್ಲಿ ನೆರವಾಗುತ್ತಾನೆ, ಮನುಷ್ಯರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಲು ಆತ ನಮಗೆ ಭೂಲೋಕವನ್ನು ಸೃಷ್ಟಿಸಿದ್ದು. ಹಾಗಾಗಿ, ದೇವರನ್ನು ಪ್ರೀತಿಸುವವರು ನಿರ್ಗತಿಕ ಮನುಷ್ಯರನ್ನು ಪ್ರೀತಿಸುತ್ತಾರೆ ಎಂದು ಹೇಳಿದರು.
ಉದ್ಘಾಟನೆ:  ಮಕ್ಕಳ ಆರೈಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್, ಸರ್ಕಾರದಿಂದ ನಾಡಿನ ಸುಧಾರಣೆ ಮಾಡುವುದು ಸುಲಭದ ಕೆಲಸವಲ್ಲ, ಸಮಾಜಮುಖಿ ಆಗಿರುವವರು ಗುಣಮಟ್ಟದ ಜೊತೆ ರಾಜಿಯಾಗದೆ ಇಂತಹ ಕೆಲಸಗಳನ್ನು ಹೆಚ್ಚು ಹೆಚ್ಚಾಗಿ ಮಾಡಿದಾಗ ಮಾತ್ರ ದೇಶದ ಮತ್ತು ನಾಡಿನ ಸುಧಾರಣೆ ಸಾಧ್ಯವಾಗಲಿದೆ. ಕ್ರೈಸ್ತ ಮಿಷನರಿಗಳು ಶಿಕ್ಷಣ ಮತ್ತು ಅರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿರುವುದಕ್ಕೆ ಅವರಲ್ಲಿನ ಕ್ರಿಯಾಶೀಲತೆ ಪ್ರಮುಖ ಕಾರಣವಾಗಿದೆ. ಮಸ್ಗಲೇನಸ್ ಕುಟುಂಬದ ಸಮಾಜಮುಖಿ ಕಾರ್ಯ ಇತರರಿಗೂ ಮಾರ್ಗದರ್ಶನವಾಗಲಿ ಎಂದು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಅಬಕಾರಿಯಲ್ಲಿ ಲಾಭ ಗಳಿಸುವ ಸರ್ಕಾರ ಆಸ್ಪತ್ರೆಗಳನ್ನು ನಿರ್ವಹಿಸುವಲ್ಲಿ ನಷ್ಟ ಅನುಭವಿಸುತ್ತಿದ್ದು, ಈ ಭಾಗಕ್ಕೆ ಉತ್ತಮ ಆಸ್ಪತ್ರೆಯನ್ನು ನೀಡಿರುವ ಮಸ್ಗಲೇನಸ್ ಕುಟುಂಬದ ಕನಸು ನನಸು ಮಾಡಲು ಪಟ್ಟಣದಲ್ಲಿರುವ ಈ ಭಾಗದ ವೈದ್ಯರು ತಿಂಗಳಿಗೊಮ್ಮೆ ಇಲ್ಲಿಗೆ ತಮ್ಮ ಉಚಿತ ಸೇವೆಯನ್ನು ನೀಡಬೇಕಿದೆ ಎಂದರು.
ಈ ಭಾಗದ ಕಾಫಿ ಮತ್ತು ಅಡಕೆ ಬೆಳೆಗಾರರಿಗೆ ಅಂತಹ ಸಮಸ್ಯೆಗಳೇನೂ ಇಲ್ಲ, ಸರ್ಕಾರ ಕೃಷಿ ತೆರಿಗೆಯನ್ನು ಮನ್ನಾ ಮಾಡಿರುವುದರಿಂದ ಮಸ್ಗಲೇನಸ್ ರೀತಿಯಲ್ಲಿ ಬೆಳೆಗಾರರು ತಮ್ಮ ಲಾಭದ ಒಂದಷ್ಟು ಭಾಗವನ್ನು ಸಮಾಜಕ್ಕೆ ವಿನಿಯೋಗಿಸಬೇಕೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ. ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement