ಉಕ್ಕಿ ಹರಿದ ಬಿಜೆಪಿ ಕಾರ್ಯಕರ್ತರ ಉತ್ಸಾಹ
ಕ.ಪ್ರ.ವಾರ್ತೆ ್ಣ ಚಿಕ್ಕಮಗಳೂರು ್ಣ ಮೇ 16
ರಾಷ್ಟ್ರದಲ್ಲಿ ಬಿಜೆಪಿಯ ವಿಜಯಯಾತ್ರೆ ಆರಂಭ ಆಗುತ್ತಿದ್ದಂತೆ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಹಲವೆಡೆ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಹಿ ಹಂಚಿ ಕುಣಿದು ಕುಪ್ಪಳಿಸಿದರು.
ತರೀಕೆರೆ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಕೊಪ್ಪ ಪಟ್ಟದ ಬಸ್ ನಿಲ್ದಾಣದ ಮುಂಭಾಗ ವಿಜಯೋತ್ಸವ ಆಚರಿಸಲಾಯಿತು. ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣ ಮುಂಭಾಗ, ಲಯನ್ಸ್ ವೃತ್ತ, ಕೆ.ಎಂ. ರಸ್ತೆಗಳಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ರಾಷ್ಟ್ರದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಕಡೂರಿನ ಕೆಎಲ್ವಿ ವೃತ್ತದಲ್ಲಿ ಪಟಾಕಿ ಸಿಡಿಸಿದರು. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ದೇವೇಗೌಡ ಗೆಲವು ಸಾಧಿಸಿದ್ದರಿಂದ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭಾರೀ ಅಂತರದಿಂದ ಗೆಲುವು ಸಾಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ನಗರದ 4 ದಿಕ್ಕುಗಳಿಂದ ಹನುಮಂತಪ್ಪ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಹನುಮಂತಪ್ಪ ವೃತ್ತ, ಹೌಸಿಂಗ್ ಬೋರ್ಡ್, ವಿಜಯಪುರ ವೃತ್ತ, ರತ್ನಗಿರಿ ರಸ್ತೆ, ಗೌರಿಕಾಲುವೆ, ಅಯ್ಯಪ್ಪನಗರ, ಕೋಟೆ, ಬಸವನಹಳ್ಳಿ, ನಾರಾಯಣಪುರ, ಆಜಾದ್ ಪಾರ್ಕ್ ವೃತ್ತ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದರು.
ವಿಜಯೋತ್ಸವ ತಡೆಗೆ ಯತ್ನ: ಹನುಮಂತಪ್ಪ ವೃತ್ತದಲ್ಲಿ ನಗರಸಭೆ ಸದಸ್ಯ ಹಾಗೂ ಜಿಲ್ಲಾ ವಕ್ತಾರ ಎಚ್.ಡಿ. ತಮ್ಮಯ್ಯ ನೇತೃತ್ವದಲ್ಲಿ ಕಾರ್ಯಕರ್ತರು ಮೆರವಣಿಗೆ ಮೂಲಕ ಆಗಮಿಸಿದ ಸಂದರ್ಭದಲ್ಲಿ ಪೊಲೀಸರು ತಡೆದು ಪಟಾಕಿ ಸಿಡಿಸದಂತೆ ವಿಜಯೋತ್ಸವಕ್ಕೆ ತಡೆಯೊಡ್ಡಲು ಮುಂದಾದಾಗ ಜಯಘೋಷಗಳ ನಡುವೆ ಮುನ್ನುಗ್ಗಿ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದೇ ಸಂದರ್ಭ ಮಾತನಾಡಿದ ಎಚ್.ಡಿ. ತಮ್ಮಯ್ಯ, 1977ರ ಚುನಾವಣೆಯಲ್ಲಿನ ಫಲಿತಾಂಶ ಮರುಕಳಿಸಿ ಇತಿಹಾಸ ನಿರ್ಮಾಣ ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. ಕಾಂಗ್ರೆಸ್ ಪಕ್ಷದ 67 ವರ್ಷ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ದೇಶದ ಅಭದ್ರತೆ, ಹೀಗೆ ಹತ್ತುಹಲವು ನ್ಯೂನತೆಗಳನ್ನು ಜನ ಕಂಡುಕೊಂಡ ಕಾರಣ, ಕಾಂಗ್ರೆಸ್ ಪಕ್ಷ ಇಂತಹ ದಯನೀಯ ಪರಿಸ್ಥಿತಿ ತಲುಪಲು ಕಾರಣವಾಗಿದೆ ಎಂದರು.
ನರೇಂದ್ರ ಮೋದಿ ದೇಶಾದ್ಯಂತ ಮಿಂಚಿನಂತೆ ಸಂಚರಿಸಿ 'ಕಾಂಗ್ರೆಸ್ ಹಠಾವೋ ದೇಶ್ ಬಚಾವೋ' ಎಂಬ ಘೋಷಣೆ ಸಾರಿ ಕಳೆದ 3 ತಿಂಗಳಲ್ಲಿ 400 ರ್ಯಾಲಿಯ ಮೂಲಕ ಜನರ ಮನಹೊಕ್ಕಿದ್ದರು ಎಂದು ಹೇಳಿದರು.
ಈ ಸಂಬಂಧ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತದಾರರು ಶೋಭಾ ಕರಂದ್ಲಾಜೆ ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲುವಿನ ಹೋಳಿಗೆ ಬಡಿಸಿದ್ದಾರೆ. ಜನಪ್ರತಿನಿಧಿಗಳು ಕಾರ್ಯಕರ್ತರ ಶ್ರಮದ ಫಲವಾಗಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವಿರೋಧಿ ಅಲೆಯನ್ನು ಮತದಾರರು ವ್ಯಕ್ತಪಡಿಸಿದ್ದಾರೆ. ಆದಕಾರಣ ಸಿಎಂ ತಮ್ಮ ವರ್ಚಸ್ಸು ಕಳೆದುಕೊಂಡಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ತಾಪಂ ಸದಸ್ಯ ಕನಕರಾಜ್, ನಗರಸಭೆ ಉಪಾಧ್ಯಕ್ಷ ಅಫ್ಸರ್, ಸದಸ್ಯರಾದ ದೇವರಾಜಶೆಟ್ಟಿ, ಸುಧೀರ್, ಮುಖಂಡರಾದ ಕೋಟೆ ರಂಗನಾಥ್, ಟಿ.ರಾಜಶೇಖರ್, ಮಧುಕುಮಾರ್ರಾಜ್ ಅರಸ್, ನಿಂಗೇಗೌಡ ಇದ್ದರು.