ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಫಿ ನಾಡು 'ಶೋಭಾ'ಯಮಾನ

Mainashree
Updated On : 17 May 2014, 10:37 am

ಆರ್.ತಾರಾನಾಥ್
ಕನ್ನಡಪ್ರಭ ವಾರ್ತೆ ್ಣ ಚಿಕ್ಕಮಗಳೂರು ್ಣ ಮೇ 16
ಕಾಂಗ್ರೆಸ್ ಭದ್ರ ಕೋಟೆ ಎನಿಸಿದ ಕಾಫಿ ಕಣಿವೆಯಲ್ಲಿ ಮತ್ತೆ ಕಮಲ ಅರಳಿ, ಗೆಲವಿನ ಕಂಪು ಸೂಸಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಭಾರೀ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ. ಒಟ್ಟು 11 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಅಂದರೆ 4 ದಶಕಗಳ ಕಾಲ ಕಾಂಗ್ರೆಸ್ ಸಂಸದರು ಈ ಜಿಲ್ಲೆಯಲ್ಲಿದ್ದರು. ಆದರೆ, 1996ರ ನಂತರದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಾ ಬಂದಿದೆ.
1996 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜನತಾದಳ ಗೆಲವು ಸಾಧಿಸಿತು. ಅಂದಿನಿಂದ ಕಾಂಗ್ರೆಸ್‌ನ ಗ್ರಹಬಲ ಬದಲಾವಣೆ ಆಯಿತು. 1998 ರಲ್ಲಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತು. ನಂತರದ ಚುನಾವಣೆಗಳಲ್ಲಿ ಈ ವಿಜಯಯಾತ್ರೆಯ ನಡೆ ಮುಂದುವರಿಯಿತು. ಅಂದರೆ, ಸತತವಾಗಿ 4 ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಲೇ ಬಂದಿತು.
ಕ್ಷೇತ್ರ ಪುನರ್ ವಿಂಗಡಣೆ:  ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಉಡುಪಿ ಜಿಲ್ಲೆಯೊಂದಿಗೆ ವಿಲೀನವಾಯಿತು. ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಗೆಲುವು ಸಾಧಿಸಿದ್ದರು. ಅವರು ಮುಖ್ಯಮಂತ್ರಿ ಆದ ಬಳಿಕ ತೆರವಾದ ಸಂಸದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಗೆಲವು ಸಾಧಿಸಿದರು. 4 ಚುನಾವಣೆಗಳ ನಂತರ ಮತ್ತೆ ಈ ಕ್ಷೇತ್ರ ಕೈ ವಶವಾಗಿತ್ತು.
2012 ರಲ್ಲಿ ಉಪ ಚುನಾವಣೆ ನಡೆದ ಸಂದರ್ಭ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಒಂದು ಹೆಜ್ಜೆಯನ್ನು ಕೆಜೆಪಿಯಲ್ಲಿಟ್ಟಿದ್ದರು. ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟಿನಿಂದಾಗಿ ಕಾಂಗ್ರೆಸ್‌ಗೆ ಲಾಭವಾಯಿತು.
ಉಪ ಚುನಾವಣೆಯಲ್ಲಿ ಕೆ.ಜಯಪ್ರಕಾಶ್ ಹೆಗ್ಡೆ 45,724 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯಲ್ಲಿ ಬಿಕ್ಕಟ್ಟು ಇಲ್ಲದೆ ಹೋಗಿದ್ದರೆ ಭಾಗಶಃ ಆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಬಿಗ್ ಫೈಟ್ ಆಗಲಿದೆ ಎಂದು ಮತದಾರರು ಹಾಗೂ ರಾಜಕೀಯ ಪಂಡಿತರು ಅಂದುಕೊಂಡಿದ್ದರು. ಆದರೆ, ಶೋಭಾ ಕರಂದ್ಲಾಜೆ ಅವರು ಪಡೆದಿರುವ ಮತಗಳನ್ನು ನೋಡಿದರೆ, ರಾಷ್ಟ್ರದಲ್ಲಿ ಬೀಸಿದ ಮೋದಿಯ ಹವಾ ಕಾಫಿಯ ಕಣಿವೆಯಲ್ಲಿ ಬಿರುಗಾಳಿ ಎಬ್ಬಿಸಿದೆ ಎಂಬ ಮಾತನ್ನು ತೆಗೆದು ಹಾಕುವಂತ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವ ಯುಪಿಎ ಸರ್ಕಾರ ಒಂದು ದಶಕಗಳ ಕಾಲ ಅಧಿಕಾರ ನಡೆಸಿದ್ದು, ಈ ಬಾರಿ ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದರು ಎಂಬುದು ಈ ಫಲಿತಾಂಶದಿಂದ ಖಚಿತವಾಗುತ್ತದೆ.
ಕೈ ಕೊಟ್ಟ ಸಮಸ್ಯೆಗಳು:  ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎದುರು ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿದ್ದವು. ಇವುಗಳಲ್ಲಿ ಪ್ರಮುಖವಾಗಿರುವುದು ಅಡಕೆ ನಿಷೇಧ. ಕೇಂದ್ರದ ಕಾಂಗ್ರೆಸ್ ಸರ್ಕಾರ ಅಡಕೆಯನ್ನು ನಿಷೇಧ ಮಾಡಲು ಹೊರಟಿದೆ ಎಂಬ ವಿಷಯವನ್ನು ಬಿಜೆಪಿ ಚುನಾವಣಾ ಸಂದರ್ಭ ಪ್ರಚಾರಕ್ಕೆ ಬಳಸಿಕೊಂಡಿತು. ಚಿಕ್ಕಮಗಳೂರು ಕಾಫಿಯ ನಾಡಾಗಿದ್ದರೂ ಸಹ ಇಲ್ಲಿನ ಎಲ್ಲಾ 7 ತಾಲೂಕುಗಳಲ್ಲಿ ಅಡಕೆ ಬೆಳೆಗಾರರು ಇದ್ದಾರೆ. ಅದುದರಿಂದ ಬಿಜೆಪಿ ಬಿಟ್ಟ ಅಡಕೆ ನಿಷೇಧದ ಬಾಣ ಕಾಂಗ್ರೆಸ್ ಪಕ್ಷಕ್ಕೆ ನಾಟಿದೆ.
ಇನ್ನು, ಡಾ.ಕಸ್ತೂರಿ ರಂಗನ್ ವರದಿ ಜಾರಿಯ ವಿಷಯವೂ ಸಹ ಮಲೆನಾಡಿನಲ್ಲಿ ಚುನಾವಣೆಯಲ್ಲಿ ಚರ್ಚಿತ ವಿಷಯವಾಗಿತ್ತು. ಇದರ ಜತೆಗೆ ರಾಜ್ಯ ಸರ್ಕಾರದ ಪರಿಮಿತಿಯೊಳಗೆ ಬರುವಂತಹ ಅರಣ್ಯ ಒತ್ತುವರಿ ತೆರವು ಸಮಸ್ಯೆಯೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಮುಳುವಾಯಿತು ಎಂಬುದು ಸದ್ಯ ಕಣ್ಣಿಗೆ ಕಾಣುತ್ತಿರುವ ಚಿತ್ರಣವಾಗಿದೆ. ಒಟ್ಟಾರೆ, ಮೋದಿಯ ಅಲೆಗೆ ಕಾಫಿಯ ಕಣಿವೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement