ಚಿಕ್ಕಮಗಳೂರಿನ ಚಂದ್ರಪ್ಪರಿಗೆ ಒಲಿದ ದುರ್ಗ
ಚಿಕ್ಕಮಗಳೂರು: ಕೋಟೆಯ ನಾಡು ಚಿತ್ರದುರ್ಗದಲ್ಲಿ ಗೆದ್ದಿರುವ ಬಿ.ಎನ್. ಚಂದ್ರಪ್ಪ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೋಪಾಲ ಬುಸೇನಹಳ್ಳಿ ಗ್ರಾಮದವರು.
ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಚಂದ್ರಪ್ಪ ತರೀಕೆರೆಯಲ್ಲಿ ಕೆಲ ವರ್ಷಗಳ ಕಾಲ ವರ್ತಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಗುರುತಿಸಿಕೊಂಡವರು.
ಕರ್ನಾಟಕ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಿ.ಎನ್. ಚಂದ್ರಪ್ಪ ಅವರು ಲಿಡ್ಕರ್ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಲಿ ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಚಂದ್ರಪ್ಪ ಅವರು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಮೂಡಿಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಅವರು 31,782 ಮತ ಪಡೆದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ದಿಂದ ಸ್ಪರ್ಧೆ ಮಾಡಿದ್ದ ಬಿ.ಬಿ. ನಿಂಗಯ್ಯ ಅವರು ಗೆಲವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಿತ್ತಾಟದಿಂದಾಗಿ ನಿಂಗಯ್ಯ ಅವರಿಗೆ ಅನುಕೂಲವಾಯಿತು.
ಪರಾಭವಗೊಂಡ ನಂತರ ಚಂದ್ರಪ್ಪ ಧೃತಿಗೆಡಲಿಲ್ಲ. ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಂಡರು. ಅವರು ಟಿಕೆಟ್ಗಾಗಿ ನಡೆಸಿದ ಪ್ರಯತ್ನ ಸಫಲವಾಯಿತು. ಹೊರ ಜಿಲ್ಲೆಯವರಾದರೂ ದುರ್ಗದ ಮಂದಿ ಚಂದ್ರಪ್ಪ ಅವರನ್ನು ಕೈ ಬಿಡಲಿಲ್ಲ. ಬಿ.ಎನ್. ಚಂದ್ರಪ್ಪ ಅವರಿಗೆ ಕೆ.ಎಚ್. ಮುನಿಯಪ್ಪ ಅವರು ರಾಜಕೀಯದ ಗಾಡ್ ಫಾದರ್.