ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಪೋಷಣೆ ಬಗ್ಗೆ ಜನಜಾಗೃತಿಗಾಗಿ ಯೋಜನೆ

Lingaraj Badiger
Updated On : 19 May 2014, 10:41 am

ಕ.ಪ್ರ.ವಾರ್ತೆ, ಕಡೂರು, ಮೇ 18
ಕಾನೂನು ಸೇವಾ ಸಮಿತಿಯಿಂದ ಕುಪೋಷಣೆಗೆ ಒಳಗಾದ ಮಕ್ಕಳ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ಶಾಲೆಯಿಂದ ಹೊರಗೆ ಇರುವ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕಡೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಬಾಲನ್ಯಾಯ ಕಾಯ್ದೆ ತ್ವರಿತ ಅನುಷ್ಠಾನ ಕುರಿತು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ತ್ರೀ- ಪುರುಷ ಆರೋಗ್ಯ ಸಹಾಯಕರು ಮತ್ತು ಆರೋಗ್ಯ ನಿರೀಕ್ಷಕರಿಗೆ ಶನಿವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೌರ್ಜನ್ಯಕ್ಕೆ ಒಳಗಾದ ತಕ್ಷಣ ಮಹಿಳೆ ಅಥವಾ ಮಕ್ಕಳು ಮೊದಲು ಧಾವಿಸುವುದು ಆರೋಗ್ಯ ಸಿಬ್ಬಂದಿಯೆಡೆಗೆ. ಈ ಸಂದರ್ಭದಲ್ಲಿ ಅವರ ಮನಸ್ಥಿತಿ ಅರಿತು ನಿಮ್ಮವರಂತೆ ಅವರನ್ನೂ ಭಾವಿಸಿ ಸೂಕ್ತ ವೈದ್ಯೋಪಚಾರ ನೀಡಿ, ನ್ಯಾಯಾಲಯಕ್ಕೆ ಸ್ಪಷ್ಟ ವರದಿ ನೀಡಿದರೆ ಅಪರಾಧಿಗಳನ್ನು ಶಿಕ್ಷಿಸುವುದು ಸುಲಭ.
ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸರ್ಕಾರವು ಕಾಯಿದೆ ಜಾರಿಗೆ ತಂದಿದ್ದು, ಇದರಲ್ಲಿ ಮಕ್ಕಳನ್ನು ಹೇಗೆ ಬಳಸಿಕೊಂಡರೆ ಅಪರಾಧ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಿದೆ ಮತ್ತು ಅವರಿಗೆ ಯಾವ ರೀತಿ ಚಿಕಿತ್ಸೆ ಕೊಡಬೇಕು ಎಂದು ವಿವರಿಸಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಧುನಿಕತೆಯ ಫಲವಾಗಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಸಮಾಜದಲ್ಲಿ ಅಪರಾಧಿ ಮನೋಭಾವ ಕಡಿಮೆಯಾಗಲು ಶೋಷಣೆಗೆ ತುತ್ತಾದವರ ಜತೆ ಸಾಮಾಜಿಕ ಕಳಕಳಿಯಿಂದ ವರ್ತಿಸಿ ಎಂದು ಕರೆ ನೀಡಿದರು.
ಕಾಯಿದೆ ಜಾರಿ: ಮುಖ್ಯ ಅತಿಥಿಯಾಗಿದ್ದ ತಾಲೂಕು ಮಕ್ಕಳ ಕಲ್ಯಾಣ ಅಧಿಕಾರಿ ರಂಗನಾಥ್ ಮಾತನಾಡಿ, 2000ಕ್ಕಿಂತ ಹಿಂದೆ ಮಕ್ಕಳ ಪಾಲನೆ ಪೋಷಣೆ ಕುರಿತ ಕಾಯ್ದೆ ಆಯಾ ರಾಜ್ಯಗಳ ತೀರ್ಮಾನದಂತೆ ನಿರ್ಧಾರವಾಗುತ್ತಿತ್ತು. 2000 ಇಸವಿಯಲ್ಲಿ ರಾಷ್ಟ್ರವ್ಯಾಪಿ ಒಂದೇ ರೀತಿಯ ಕಾಯಿದೆ ಜಾರಿಗೆ ಬಂದಿದೆ. ಮಕ್ಕಳ ರಕ್ಷಣೆ, ಪಾಲನೆ ಮತ್ತು ಪೋಷಣೆ ಎಲ್ಲ ನಾಗರಿಕರ ಕರ್ತವ್ಯವಾಗಿದ್ದು, ಬಾಲನ್ಯಾಯ ಕಾಯ್ದೆಯ ಸಮಗ್ರ ಅನುಷ್ಠಾನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಮೂಢನಂಬಿಕೆ ತೊಲಗಿಸಿ: ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಕೆ. ಪ್ರಭು ಮಾತನಾಡಿ, ಮಕ್ಕಳಲ್ಲಿ ಅಪನಂಬಿಕೆ ಮತ್ತು ಮೂಢನಂಬಿಕೆ ತೊಲಗಿಸಿ ಸೂಕ್ತ ಭದ್ರತೆ ಒದಗಿಸುವುದು ನಾಗರಿಕ ಸರ್ಕಾರದ ಕರ್ತವ್ಯ. ಪೋಷಕರು ಆಧುನಿಕತೆಯ ಅನಾಹುತಗಳ ಬಗೆಗೆ ಮನವರಿಕೆ ಮಾಡಿಕೊಡುವ ಮೂಲಕ ಮಕ್ಕಳನ್ನು ಸರಿದಾರಿಯಲ್ಲಿ ನಡೆಸಬೇಕು ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ಬಿ.ಎಸ್. ಮಮತಾ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ರಕ್ಷಣಾಧಿಕಾರಿ ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಕೆ.ಬಿ. ಸೋಮೇಶ್, ಮಕ್ಕಳ ಜಿಲ್ಲಾ ರಕ್ಷಣಾಧಿಕಾರಿ ಬಸವರಾಜ್ ಮತ್ತು ಆರೋಗ್ಯ ಸಹಾಯಕರು ಮತ್ತು ಆರೋಗ್ಯ ನಿರೀಕ್ಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement