ಮಲೆನಾಡಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಶೋಭಾ ಕರಂದ್ಲಾಜೆ
ಕ.ಪ್ರ.ವಾರ್ತೆ, ಶೃಂಗೇರಿ, ಮೇ 18
ಜಿಲ್ಲೆಯ ಭಾಗದ ಪ್ರಮುಖ ಸಮಸ್ಯೆಗಳಾದ ಅಡಕೆ, ಅಕ್ರಮ- ಸಕ್ರಮ, ಒತ್ತುವರಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸದಸ್ಯೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪಟ್ಟಣದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಕ್ಕೆ ತಕ್ಕಂತೆ ಸ್ಪಂದಿಸುತ್ತೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆಯುತ್ತೇನೆ ಎಂದರು.
ಜನರು ನಿರೀಕ್ಷೆಗೂ ಮೀರಿ ಅಭೂತಪೂರ್ವ ಗೆಲವು ನೀಡಿದ್ದಾರೆ. ಇದು ನರೇಂದ್ರ ಮೋದಿ, ಜನರ, ಪಕ್ಷದ, ಕಾರ್ಯಕರ್ತರ ಗೆಲುವಾಗಿದೆ. ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಎನ್‌ಡಿಎಗೆ ಗೆಲವು ನಿರಿಕ್ಷಿಸಲಾಗಿತ್ತು. ಆದರೆ, 35 ವರ್ಷಗಳಲ್ಲಿ ಕಾಂಗ್ರೇಸ್ಸೇತರ ಪಕ್ಷಕ್ಕೆ ಇಷ್ಟೊಂದು ಬಹುಮತ ನೀಡಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದರು.
ನಾಡಿನ ಅಭಿವೃದ್ಧಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ. ಮಹಿಳೆಯರ ಧ್ವನಿಯಾಗಿ ದುಡಿಯುತ್ತೇನೆ. ಭಾರಿ ಅಂತರದಿಂದ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಅಭಿನಂದನೆಗಳು ಎಂದರು.
ಶಾಸಕ ಡಿ.ಎನ್. ಜೀವರಾಜ್, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಸ್. ನಟೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅಮಿತಾ ಸತ್ಯನಾರಾಯಣ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು. ಪಟ್ಟಣದ ಮುಖ್ಯ ದ್ವಾರದಿಂದ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿದರು.