ಆಂಜನೇಯ ಸ್ವಾಮಿ 24 ನೇ ಪ್ರತಿಷ್ಠಾಪನಾ ಮಹೋತ್ಸವ
ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಎರಡು ದಿನಗಳ ಕಾಲದ 24ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮ ಮಂಗಳವಾರ ಆರಂಭಗೊಂಡಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಾಂದಿ, ಮಹಾಸಂಕಲ್ಪ ನಡೆಯಿತು. ವೀರಾಂಜನೇಯಸ್ವಾಮಿಗೆ ಪವಮಾನ ಅಭಿಷೇಕ, ಕಲಾಭಿಷೇಕ, ಅಲಂಕಾರ ವಿಶೇಷ ಪೂಜೆ ನಡೆಸಲಾಯಿತು. ನಂತರ ನೂರಾರು ಭಕ್ತರ ನಡುವೆ ಮಹಾಗಣಪತಿ, ಸುಬ್ರಹ್ಮಣ್ಯ ಮತ್ತು ಪವಮಾನ ಹೋಮ, ಶತಕಳಸ ಸ್ಥಾಪನೆ, ಆಶ್ಲೇಷ ಬಲಿ, ಅಷ್ಟಾವದಾನ ಸೇವೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್, ಉಪಾಧ್ಯಕ್ಷರಾದ ವಿ. ಗಿರಿಯಣ್ಣ, ಬಿ.ವಿ.ಎ. ಕಾಮತ್, ಕಾರ್ಯಾಧ್ಯಕ್ಷ ಎಚ್. ರಾಜಶೇಖರ್, ಗೌರವಾಧ್ಯಕ್ಷ ಧರ್ಮರಾಜ್ ಇದ್ದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ಬುಧವಾರ ಬೆಳಗ್ಗೆ ವಿವಿಧ ಹೋಮ, ಹವನ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.